ADVERTISEMENT

ಗೋವಿನಿಂದ ಸಂಸ್ಕೃತಿ ಉಳಿವು: ರಾಘವನ್‌

​ಪ್ರಜಾವಾಣಿ ವಾರ್ತೆ
Published 7 ಮೇ 2025, 16:03 IST
Last Updated 7 ಮೇ 2025, 16:03 IST
ಗೋ ಸೇವಾ ಗತಿವಿಧಿ ಹುಬ್ಬಳ್ಳಿ ಮಹಾನಗರ ಘಟಕವು ಹವ್ಯಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು
ಗೋ ಸೇವಾ ಗತಿವಿಧಿ ಹುಬ್ಬಳ್ಳಿ ಮಹಾನಗರ ಘಟಕವು ಹವ್ಯಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು   

ಹುಬ್ಬಳ್ಳಿ: ’ದೇಶದ ಸಂಸ್ಕೃತಿ ಗೋವಿನಿಂದ ಉಳಿದಿದೆ. ಪೂರ್ವಜರ ಕಾಲದಿಂದಲೂ ಗೋ ಉತ್ಪನ್ನಗಳನ್ನು ಬಳಸುತ್ತಾ ಬಂದಿದ್ದೇವೆ. ಹೀಗಾಗಿ, ಪ್ರತಿಯೊಬ್ಬ ಭಾರತೀಯ ಜನರ ಡಿಎನ್‌ಎದಲ್ಲಿ  ಗೋವಿನ ಅಂಶವಿದೆ‘ ಎಂದು ಗೋ ಸೇವಾ ಗತಿವಿಧಿ ಸಂಘಟನೆಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖ ಕೆ.ಇ.ಎಂ.ರಾಘವನ್‌ ಹೇಳಿದರು.

ನಗರದ ಹವ್ಯಕ ಭವನದಲ್ಲಿ ಗೋ ಸೇವಾ ಗತಿವಿಧಿ ಹುಬ್ಬಳ್ಳಿ ಮಹಾನಗರ ಘಟಕದಿಂದ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ’ನಗರ ಜೀವನದಲ್ಲಿ ದೇಶೀ ಗೋವಿನ ಪಾತ್ರ ಮತ್ತು ತಾರಸಿ ತೋಟದ ಅವಶ್ಯಕತೆ‘ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗೋವಿನ ತುಪ್ಪ ಹಾಗೂ ಜೇನುತುಪ್ಪ ಸಾವಿರ ವರ್ಷವಾದರೂ ಕೆಡುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಒಂದೇ ಗೋವು ಅನೇಕ ಪೀಳಿಗೆಗಳಿಗೆ ಹಾಲುಣಿಸುತ್ತಾ ಬಂದಿರುವ ಉದಾಹರಣೆಗಳು ಸಿಗುತ್ತವೆ ಎಂದರು.

ADVERTISEMENT

ರಾಸಾಯನಿಕ ಸಿಂಪಡಣೆ ಮಾಡಿದ ತರಕಾರಿ ಹಾಗೂ ಹಣ್ಣುಗಳಿಂದ ಜನರ ದೇಹದಲ್ಲಿ ವಿಷಕಾರಿ ಅಂಶ ಸೇರಿಕೊಳ್ಳುತ್ತಿದೆ. ಕಾಲಕ್ರಮೇಣ ಜನರು ಗೋ ಮಾತಾ ಮತ್ತು ಭೂ ಮಾತೆಯಿಂದ ದೂರಾಗುತ್ತಿರುವ ಕಾರಣ ಅನಾರೋಗ್ಯದ ಸಮಸ್ಯೆಗೆ ಈಡಾಗುತ್ತಿದ್ದಾರೆ. ನಗರಗಳಲ್ಲಿ ತಾರಸಿ ತೋಟ ಮಾಡಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ತಾರಸಿ ತೋಟದಿಂದ ಶುದ್ಧ ಗಾಳಿಯ ಸಿಗುವುದಲ್ಲದೆ ಗುಣಮಟ್ಟದ ತರಕಾರಿಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಗೋ ಸಂರಕ್ಷಣೆ ಹಾಗೂ ಗೋ ಸೇವೆಗೆ ಸದಾ ಬದ್ಧವಾಗಿದ್ದೇನೆ ಎಂದರು.

’ಕಾಶ್ಮೀರದ ಪೆಹಲ್ಗಾಮ್ ಘಟನೆಗೆ ಕಾರಣವಾದ ಪಾಕಿಸ್ತಾನದ ಉಗ್ರರ ವಿರುದ್ಧ ಭಾರತದಿಂದ ಪ್ರತೀಕಾರ ಆಗಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಒತ್ತಾಸೆಯಾಗಿತ್ತು. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಚಾಣಾಕ್ಷತೆ ಮೆರೆದಿದ್ದಾರೆ. ’ಆಪರೇಷನ್‌ ಸಿಂದೂರ‘ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಭಾರತೀಯ ಸೈನ್ಯಕ್ಕೆ ಇನ್ನಷ್ಟು ಬಲ ತುಂಬಲು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ‘ ಎಂದರು.

ಸಮಾರಂಭ ಆರಂಭದ ಪೂರ್ವದಲ್ಲಿ ಶಿರಸಿಯ ನಾರಾಯಣ ಅವರು, ದಾಸರು ಕೀರ್ತನೆ ಮೂಲಕ ಗೋವಿನ ಮಹತ್ವ ಹಾಗೂ ಗೋಪಾಲನ ಕುರಿತು ಮನವರಿಕೆ ಮಾಡಿದರು. ವೆಂಕಟೇಶ ಹೆಗಡೆ ತಬಲಾ ಹಾಗೂ ಕಮಲಾಕರ ಹೆಗಡೆ ಹಾರ್ಮೋನಿಯಂ ಸಾತ್‌ ನೀಡಿದರು.

ಗೋ ಸೇವಾ ಗತಿವಿಧಿಯ ಪ್ರಾಂತ ಸಹ ಸಂಯೋಜಕ ಸಿ.ಬಿ.ರೆಡ್ಡಿ, ಆರ್‌ಎಸ್‌ಎಸ್‌ ವಿಭಾಗೀಯ ಪ್ರಮುಖ ಗೋವಿಂದಪ್ಪ ಗೌಡಪ್ಪಗೋಳ, ಹವ್ಯಕ ಸಂಘದ ಅಧ್ಯಕ್ಷ ವಿ.ಎಂ.ಭಟ್, ಮುಖಂಡ ಸಂಕಲ್ಪ ಶೆಟ್ಟರ್‌, ಬವರಲಾಲ್‌ ಜೈನ್‌ ಇದ್ದರು.  ದತ್ತಾತ್ರೇಯ ಭಟ್‌ ಸ್ವಾಗತಿಸಿ, ಪರಿಚಯಿಸಿದರು. ಆಶಾ ರ.ಭಟ್‌ ಪ್ರಾರ್ಥಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.