ADVERTISEMENT

ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ: ಮೂಗನೂರಮಠ

ವಿವಿಧ ಬ್ಯಾಂಕ್‌ಗಳ ಸಹಯೋಗ, ಗ್ರಾಹಕರ ಮೇಳದಲ್ಲಿ ಯೋಜನೆಗಳ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:29 IST
Last Updated 4 ಅಕ್ಟೋಬರ್ 2019, 14:29 IST
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್‌. ಮೂಗನೂರಮಠ ಮಾತನಾಡಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್‌. ಮೂಗನೂರಮಠ ಮಾತನಾಡಿದರು   

ಹುಬ್ಬಳ್ಳಿ: ‘ಜನಸಾಮಾನ್ಯರೊಂದಿಗೆ ಬ್ಯಾಂಕಿನ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಿದಾಗ ಮಾತ್ರ ಯೋಜನೆಗಳು ಜನರನ್ನು ತಲುಪುತ್ತವೆ’ ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಬಿ.ಎಸ್‌. ಮೂಗನೂರಮಠ ಹೇಳಿದರು.

ವಿವಿಧ ಬ್ಯಾಂಕ್‌ಗಳ ಸಹಯೋಗದೊಂದಿಗೆ ಶುಕ್ರವಾರ ಸವಾಯಿ ಗಂಧರ್ವ ಹಾಲ್‌ನಲ್ಲಿ ಆರಂಭವಾದ ಎರಡು ದಿನಗಳ ‘ಗ್ರಾಹಕರ ಮೇಳ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳನ್ನು ತೆರೆಯಬೇಕು. ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಒಂದೊಂದು ಎಟಿಎಂ ಯಂತ್ರಗಳನ್ನು ಅಳವಡಿಸಿದರೆ ಅವರಿಗೆ ಆರ್ಥಿಕ ವಹಿವಾಟಿಗೆ ಅನುಕೂಲವಾಗುತ್ತದೆ’ ಎಂದರು.

ADVERTISEMENT

ಆಂಧ್ರ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ಡಿ.ಚಂದ್ರಮೋಹನ್‌ ರೆಡ್ಡಿ ಮಾತನಾಡಿ, ಕೃಷಿ, ಗೃಹ, ಶಿಕ್ಷಣ, ವೈಯಕ್ತಿಕ ಸೇರಿದಂತೆ ಎಲ್ಲ ಸಾಲಗಳ ಬಗೆಗೆ ಮಾಹಿತಿ ನೀಡಲು ಮೇಳ ಆಯೋಜಿಸಲಾಗಿದೆ. ವಿವಿಧ ಬ್ಯಾಂಕ್‌ಗಳ 20 ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಹಕರು ಯಾವುದೇ ಬ್ಯಾಂಕಿನಿಂದ ಕಡಿಮೆ ಅವಧಿಯಲ್ಲಿ ತಮಗೆ ಬೇಕಾದ ಸಾಲ ಪಡೆದುಕೊಳ್ಳಬಹುದಾಗಿದೆ ಎಂದರು.

ಮೇಳದಲ್ಲಿನ ವಿವಿಧ ಬ್ಯಾಂಕ್‌ಗಳ ಮಳಿಗೆಗಳಿಗೆ ಸಾರ್ವಜನಿಕರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಆಂಧ್ರ ಬ್ಯಾಂಕ್‌ನ ವಲಯ ವ್ಯವಸ್ಥಾಪಕ ಎನ್‌.ಶ್ರೀನಿವಾಸರಾವ್‌, ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ವ್ಯವಸ್ಥಾಪಕ ಈಶ್ವರ್‌ ನಾಯಕ್‌, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಚೇರಮನ್‌ ಪಿ.ಗೋಪಿಕೃಷ್ಣ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಡಿಜಿಎಂ ಪಿಯೂಷ್‌ ಭಟ್‌, ನಬಾರ್ಡ್‌ನ ಎಜಿಎಂ ಶೀಲಾ ಭಂಡರಾಕರ್‌, ಸಿಂಡಿಕೇಟ್‌ ಬ್ಯಾಂಕ್‌ನ ವಲಯ ವ್ಯವಸ್ಥಾಪಕ ಕೆ.ಶಿವಕುಮಾರ, ಕಾರ್ಪೊರೇಷನ್‌ ಬ್ಯಾಂಕ್‌ನ ವಲಯ ಮುಖ್ಯಸ್ಥ ಸಿ.ಪ್ರಭು, ಕೆನೆರಾ ಬ್ಯಾಂಕ್‌ನ ಎಜಿಎಂ ವಿಷ್ಣುದಾಸ್‌ ಭಟ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಲಯ ವ್ಯವಸ್ಥಾಪಕ ಎ.ಎಸ್‌. ನಾಯಕ್‌, ಇಂಡಿಯನ್‌ ಬ್ಯಾಂಕ್‌ನ ಡಿಜಿಎಂ ಎಚ್‌.ರಮೇಶ, ಬ್ಯಾಂಕ್‌ ಆಫ್‌ ಇಂಡಿಯಾದ ವಲಯ ವ್ಯವಸ್ಥಾಪಕ ವಿ.ಬಿ.ರಾಮಕೃಷ್ಣ, ಬ್ಯಾಂಕ್‌ ಆಫ್‌ ಬರೋಡಾದ ವಲಯ ವ್ಯವಸ್ಥಾಪಕ ರಂಜನ್‌ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.