ADVERTISEMENT

ಧಾರವಾಡ: ವಿಧಾನ ಪರಿಷತ್‌ ಚುನಾವಣೆ- ಕಾಂಗ್ರೆಸ್‌ನಿಂದ ಹೊಸಬರ ಹುಡುಕಾಟ

ಬಸವರಾಜ ಹವಾಲ್ದಾರ
Published 15 ನವೆಂಬರ್ 2021, 20:00 IST
Last Updated 15 ನವೆಂಬರ್ 2021, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದವರು ಈಗ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹಾಗಾಗಿ, ಪಕ್ಷ ಹೊಸಬರ ಹುಡುಕಾಟದಲ್ಲಿದೆ.

ಅವಿಭಜಿತ ಧಾರವಾಡ ಜಿಲ್ಲೆಯಿಂದ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಳೆದ ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶ್ರೀನಿವಾಸ ಮಾನೆ ಅವರು, ಇತ್ತೀಚೆಗೆ ಹಾನಗಲ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.ಇದರಿಂದಾಗಿ ಕಾಂಗ್ರೆಸ್ ಹೊಸರೊಬ್ಬರಿಗೆ ಅವಕಾಶ ನೀಡಬೇಕಾದ ಅನಿವಾರ್ಯ ಎದುರಿಸುತ್ತಿದೆ.

ಧಾರವಾಡ ಜಿಲ್ಲೆಯಿಂದಲೇ 17 ಮಂದಿ ಆಕಾಂಕ್ಷಿಗಳಿದ್ದಾರೆ. ಹಾವೇರಿ, ಗದಗ ಜಿಲ್ಲೆಯಿಂದಲೂ ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳ ದಂಡೇ ಇದ್ದರೂ, ಗೆಲ್ಲುವ ಅಭ್ಯರ್ಥಿಗೆ ಹುಡುಕಾಟ ನಡೆದಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲೂ ಅಂತಿಮವಾಗಿಲ್ಲ.

ADVERTISEMENT

ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ಕೂಗು: ಈ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕು ಎಂಬುದು ಇಲ್ಲಿನ ಮುಖಂಡರ ಒತ್ತಾಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಕೂಡ ಸಲ್ಲಿಸಿದ್ದಾರೆ.

ಈ ಹಿಂದೆ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎ.ಎಂ.ಹಿಂಡಸಗೇರಿ ಅವರು ಆಕಾಂಕ್ಷಿಯಾಗಿದ್ದಾರೆ. ಅವರೊಂದಿಗೆ ಮಾಜಿ ಸಂಸದ ಐ.ಜಿ. ಸನದಿ ಅವರ ಪುತ್ರ ಶಾಕೀರ್‌ ಸನದಿ, ಇಸ್ಮಾಯಿಲ್‌ ತಮಟಗಾರ, ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಸೇರಿದಂತೆ ಹಲವರು ಯತ್ನ ನಡೆಸುತ್ತಿದ್ದಾರೆ. ಇವರಲ್ಲದೆ ಇನ್ನೂ ಹಲವರು ಯತ್ನ ನಡೆಸುತ್ತಿದ್ದಾರೆ.

ಸುರಕ್ಷೆಯ ಮೊರೆ: ಎರಡು ಸ್ಥಾನಗಳಿರುವುದರಿಂದ ಪ್ರತಿ ಪಕ್ಷವೂ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅವಕಾಶವಿದೆ. ಆದರೆ, ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಹಿಂದಿನ ಚುನಾವಣೆಯಂತೆ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿವೆ.

ಶಾಸಕ ಜಗದೀಶ ಶೆಟ್ಟರ್‌ ಸೇರಿ ಎರಡೂ ಪಕ್ಷಗಳ ನಾಯಕರು ಒಬ್ಬರನ್ನು ಕಣಕ್ಕಿಳಿಸುವ ಹೇಳಿಕೆ ನೀಡಿದ್ದಾರೆ. ಎರಡೂ ಪಕ್ಷಗಳಲ್ಲಿ ಎರಡನೇ ಅಭ್ಯರ್ಥಿಯಾಗುವ ಧೈರ್ಯವನ್ನು ತೋರಿಸುವವರೂ ಇಲ್ಲವಾಗಿದ್ದಾರೆ. ಹಾಗಾಗಿ, ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚಿದೆ.

***

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೇ ಅವಕಾಶ ನೀಡಬೇಕು. ನಾನೂ, ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದೇವೆ

-ಅಲ್ತಾಫ್‌ ಹಳ್ಳೂರ, ಅಧ್ಯಕ್ಷ, ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಘಟಕ

***

ಬಿಜೆಪಿಯಿಂದ ಒಬ್ಬರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ, ಪಕ್ಷದ ಮುಖಂಡರ ತೀರ್ಮಾನವೇ ಅಂತಿಮವಾಗಿರುತ್ತದೆ

-ಲಿಂಗರಾಜ ಪಾಟೀಲ, ವಿಭಾಗ ಪ್ರಭಾರಿ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.