ADVERTISEMENT

ಹುಬ್ಬಳ್ಳಿ | ಮಹಾನಗರ ಪಾಲಿಕೆ ವಾರ್ಡ್‌ ಸಮಿತಿ: 3 ವಾರ್ಡ್‌ನಲ್ಲಿ ಅರ್ಜಿ ಇಲ್ಲ!

ಪಾಲಿಕೆ ಆಡಳಿತದಲ್ಲಿ ಪಾಲ್ಗೊಳ್ಳಲು ನಾಗರಿಕರ ನಿರುತ್ಸಾಹ, ಆರು ವಾರ್ಡ್‌ಗಳಲ್ಲಿ ಒಂದು ಅರ್ಜಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:53 IST
Last Updated 28 ಜೂನ್ 2022, 5:53 IST
ಈರೇಶ ಅಂಚಟಗೇರಿ, ಸಂತೋಷ ನರಗುಂದ, ಡಾ. ಗೋಪಾಲಕೃಷ್ಣ ಬಿ.
ಈರೇಶ ಅಂಚಟಗೇರಿ, ಸಂತೋಷ ನರಗುಂದ, ಡಾ. ಗೋಪಾಲಕೃಷ್ಣ ಬಿ.   

ಹುಬ್ಬಳ್ಳಿ: ಆಡಳಿತ ವಿಕೇಂದ್ರೀಕರಣದ ಆಶಯದೊಂದಿಗೆ ವಾರ್ಡ್‌ ಸಮಿತಿ ರಚನೆಗೆ ಮುಂದಾಗಿದ್ದಮಹಾನಗರ ಪಾಲಿಕೆಗೆ, ವಾರ್ಡ್‌ವಾರು ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆಯು ದಿಗಿಲು ಹುಟ್ಟಿಸಿದೆ. ಅವಳಿನಗರದ ಒಟ್ಟು 82 ವಾರ್ಡ್‌ಗಳ ಪೈಕಿ, ಮೂರು ವಾರ್ಡ್‌ಗಳಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ!6 ವಾರ್ಡ್‌ಗಳಲ್ಲಿ ಕೇವಲ ಒಂದೊಂದು ಅರ್ಜಿಗಳು ಬಂದಿವೆ!

11 ವಾರ್ಡ್‌ಗಳಲ್ಲಿ ತಲಾ 2 ಹಾಗೂ 6 ವಾರ್ಡ್‌ಗಳಲ್ಲಿ ತಲಾ 3 ಅರ್ಜಿಗಳಷ್ಟೇ ಬಂದಿವೆ.ಏಪ್ರಿಲ್‌ನಲ್ಲೇ ಸಮಿತಿಗೆ ಅರ್ಜಿ ಕರೆದಿದ್ದ ಪಾಲಿಕೆಯು ನಂತರ ಸತತ ಮೂರು ಬಾರಿ ದಿನಾಂಕವನ್ನು (ಜೂನ್ 17ರವರೆಗೆ) ವಿಸ್ತರಿಸಿತ್ತು. ಆದರೆ, ಪಾಲಿಕೆ ನಿರೀಕ್ಷಿಸಿದ್ದ 820 ಅರ್ಜಿಗಳ ಪೈಕಿ, ಬಂದಿದ್ದು 626 ಮಾತ್ರ.

ಆಶಾದಾಯಕ: ಶೂನ್ಯ ದಾಖಲಿಸಿರುವ ವಾರ್ಡ್‌ಗಳುಬೇಸರ ಹುಟ್ಟಿಸಿರುವಂತೆ, ಕೆಲ ವಾರ್ಡ್‌ಗಳಲ್ಲಿ ಹೆಚ್ಚು ಅರ್ಜಿಗಳು ಬಂದಿರುವುದು ಆಶಾದಾಯಕ ಭಾವನೆ ಮೂಡಿಸಿವೆ. 52ನೇ ವಾರ್ಡ್‌ನಲ್ಲಿ ಅತಿ ಹೆಚ್ಚು 58 ಅರ್ಜಿಗಳು ಬಂದಿದ್ದರೆ, 51ರಿಂದ 26 ಸಲ್ಲಿಕೆಯಾಗಿವೆ. 32 ಮತ್ತು 63ನೇ ವಾರ್ಡ್‌ಗಳಿಂದ ತಲಾ 23 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಪ್ರತಿ ಸಮಿತಿಯಲ್ಲಿ ಹತ್ತು ಸದಸ್ಯರು ಇರಲಿದ್ದು, ಪಾಲಿಕೆಯ ಸ್ಥಳೀಯ ಸದಸ್ಯರು ಅಧ್ಯಕ್ಷರಾಗಿರುತ್ತಾರೆ. ಆಯುಕ್ತರು ಅಧಿಕಾರಿಯೊಬ್ಬರನ್ನು ಕಾರ್ಯದರ್ಶಿಯಾಗಿ ನೇಮಿಸುತ್ತಾರೆ. ಉಳಿದಂತೆ ಮೂವರು ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ತಲಾ ಒಬ್ಬರು ಹಾಗೂ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘಗಳಿಂದ ಮೂವರು ಸದಸ್ಯರು ಇರುತ್ತಾರೆ. ಇವರ ಅಧಿಕಾರಾವಧಿ ಪಾಲಿಕೆ ಸದಸ್ಯರ ಅಧಿಕಾರ ಅವಧಿಗೆ ಸಮವಾಗಿ ಐದು ವರ್ಷ ಇರುತ್ತದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಜಾಗೃತಿ ಕೊರತೆ: ‘ಕಡಿಮೆ ಅರ್ಜಿಗಳು ಬಂದಿರುವುದಕ್ಕೆಜಾಗೃತಿ ಕೊರತೆಯೇ ಕಾರಣ. ಸಮಿತಿಯನ್ನು ಪಾಲಿಕೆ ನಿಜವಾಗಿಯೂ ರಚಿಸುತ್ತದೆಯೇ ಎಂಬ ಅನುಮಾನ ಇಂದಿಗೂ ಜನರಲ್ಲಿದೆ. ಹಿಂದೊಮ್ಮೆ ವಾರ್ಡ್‌ವಾರು ಅರ್ಜಿಗಳನ್ನು ಸ್ವೀಕರಿಸಿ ಸಮಿತಿಯನ್ನೇ ರಚಿಸಲಿಲ್ಲ’ ಎಂದು ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥ ಸಂತೋಷ ನರಗುಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಮಿತಿ ಕುರಿತು ನಮ್ಮ ಸಂಸ್ಥೆಯು ವಾರ್ಡ್‌ಗಳ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳ್ನು ಮೂಡಿಸಿತು. ಅಲ್ಲದೆ, ನಾಗರಿಕರನ್ನು ಸಮೀಕ್ಷೆಗೆ ಒಳಪಡಿಸಿದಾಗ ಸಮಿತಿ ರಚನೆ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾದವು. ಹಾಗಾಗಿ, ಪಾಲಿಕೆಯು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸ್ಥಳೀಯ ಪಾಲಿಕೆ ಸದಸ್ಯರ ಪಾತ್ರವೂ ದೊಡ್ಡದಿದೆ’ ಎಂದರು.

ದಿನಾಂಕ ವಿಸ್ತರಣೆಯ ಅಗತ್ಯವಿದೆ: ಮೇಯರ್
‘ವಾರ್ಡ್ ಸಮಿತಿ ರಚನೆಗೆ ಅಗತ್ಯವಿರುವಷ್ಟು ಅರ್ಜಿಗಳು ಬಾರದಿರುವುದರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸುವ ಅಗತ್ಯವಿದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು. ಸಮಿತಿಯಲ್ಲಿ ಪ್ರತಿ ಓಣಿ ಅಥವಾ ಬಡಾವಣೆಯ ತಲಾ ಒಬ್ಬೊಬ್ಬರು ಇರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಸಮಿತಿಯ ಆಶಯ ಈಡೇರಲಿದೆ. ಅದಕ್ಕಾಗಿ, ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.

‘ವಾರ್ಡ್ ಸಮಿತಿಗೆ ಅರ್ಜಿ ಸಲ್ಲಿಸುವಂತೆ ಸತತ ಜಾಗೃತಿ ಮೂಡಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬಾರದಿರುವುದು ಬೇಸರ ತಂದಿದೆ. ಈ ಕುರಿತು ಸಾಮಾನ್ಯಸಭೆಯು ನಿರ್ಧರಿಸಲಿದೆ’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಿಳಿಸಿದರು.

‘ವಿಳಂಬ ಮಾಡದೆ ರಚನೆ ಪ್ರಕ್ರಿಯೆ ಆರಂಭಿಸಿ’
‘ಅವಳಿನಗರದಲ್ಲಿ 626 ಅರ್ಜಿಗಳು ಬಂದಿರುವುದು ಸಹ ಆಶಾದಾಯಕ ಬೆಳವಣಿಗೆಯಾಗಿದ್ದು, ಆಡಳಿತ ಪ್ರಕ್ರಿಯೆಯ ಭಾಗವಾಗಲು ನಾಗರಿಕರು ಹೊಂದಿರುವ ಆಸಕ್ತಿಗೆ ಸಾಕ್ಷಿಯಾಗಿದೆ. ಪೂರ್ಣ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ ಸಮಿತಿ ರಚನೆಯನ್ನು ವಿಳಂಬ ಮಾಡಬಾರದು’ ಎಂದು ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥ ಸಂತೋಷ ನರಗುಂದ ಹೇಳಿದರು.

‘ಕನಿಷ್ಠ 5 ಅರ್ಜಿಗಳು ಬಂದಿರುವ ವಾರ್ಡ್‌ಗಳಿಂದಿಡಿದು ಅತಿ ಹೆಚ್ಚು ಅರ್ಜಿಗಳು ಸ್ವೀಕಾರವಾಗಿರುವ ಕಡೆ ಸಮಿತಿ ರಚಿಸಬೇಕು. ಯಾವ ವಾರ್ಡ್‌ನಲ್ಲಿ, ಯಾವ್ಯಾವ ವರ್ಗದಡಿ ಅರ್ಜಿಗಳು ಸಲ್ಲಿಕೆಯಾಗಿಲ್ಲವೊ ಅವುಗಳ ಭರ್ತಿಗೆ, ಸ್ಥಳೀಯ ಪಾಲಿಕೆ ಸದಸ್ಯರ ನೆರವಿನೊಂದಿಗೆ ಪಾರದರ್ಶಕವಾಗಿಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.