ADVERTISEMENT

ಹುಬ್ಬಳ್ಳಿ | ಮಳೆ ಅಬ್ಬರ: 35ಕ್ಕೂ ಹೆಚ್ಚು ಮನೆಗೆ ಹಾನಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 15:14 IST
Last Updated 12 ಅಕ್ಟೋಬರ್ 2022, 15:14 IST
ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ಉಣಕಲ್ ಗ್ರಾಮದ ಬದಾಮಿ ಓಣಿಯ ಬಸವರಾಜ ಅಂಗಡಿ ಅವರ ಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಚಕ್ಕಡಿ ಹಾನಿಗೊಂಡಿದೆ
ಹುಬ್ಬಳ್ಳಿಯಲ್ಲಿ ಸುರಿದ ಮಳೆಗೆ ಉಣಕಲ್ ಗ್ರಾಮದ ಬದಾಮಿ ಓಣಿಯ ಬಸವರಾಜ ಅಂಗಡಿ ಅವರ ಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಚಕ್ಕಡಿ ಹಾನಿಗೊಂಡಿದೆ   

ಹುಬ್ಬಳ್ಳಿ: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಮನೆಗಳಿಗೆ ನೀರು ನುಗ್ಗಿದ್ದರೆ, ಗ್ರಾಮೀಣ ಭಾಗದಲ್ಲಿ 35ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸರಕು–ಸರಂಜಾಮುಗಳು ನೀರು ಪಾಲಾಗಿವೆ. ಮನೆ ಗೋಡೆ ಕುಸಿತ, ಚಾವಣಿಗೆ ಹಾನಿಯಾಗಿದ್ದು, ವಾಹನ ಜಖಂಗೊಂಡಿವೆ.

ಉಣಕಲ್‌ನ ಬದಾಮಿ ಓಣಿಯ ಬಸವರಾಜ ಅಂಗಡಿ ಅವರ ಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಸಿದ್ದನಗೌಡ ಗೌಡ್ರ ಅವರ ಚಕ್ಕಡಿ ಹಾಗೂ ಹನುಮಂತಗೌಡ ಚನ್ನವೀರಗೌಡ್ರ ಅವರ ಬೈಕ್ ಜಖಂಗೊಂಡಿವೆ. ಅಗ್ರಹಾರ ತಿಮ್ಮಸಾಗರ ಮತ್ತುಬಮ್ಮಾಪುರದ ಕಾಮಗಾನಗಾರ ಗಲ್ಲಿಯಲ್ಲಿ 3 ಮನೆಗಳು ಭಾಗಶಃ ಹಾನಿಯಾಗಿವೆ.

ಗ್ರಾಮೀಣ ಭಾಗದ ಅಂಚಟಗೇರಿ,ಬು. ಅರಳಿಕಟ್ಟಿ, ಅಗಡಿ, ಶಿರಗುಪ್ಪಿ, ಕಿರೇಸೂರು, ಇಂಗಳಹಳ್ಳಿ ಸೇರಿದಂತೆ ಹಲವೆಡೆ ಮನೆ ಗೋಡೆಗಳು ಕುಸಿದಿವೆ. ಅಂಚಟಗೇರಿಯಲ್ಲಿ ಬಸಪ್ಪ ಗದಿಗೆಪ್ಪ ಮೊರಬದ ಅವರ ಕೊಟ್ಟಿಗೆ ನೆಲಸಮವಾಗಿ ಎಮ್ಮೆ ಮೃತಪಟ್ಟಿದೆ. ಎರಡು ಹೋರಿ ಹಾಗೂ ಒಂದು ಆಕಳಿಗೆ ಗಾಯವಾಗಿದೆ.

ADVERTISEMENT

ಮಾಹಿತಿ ಸಂಗ್ರಹ: ‘ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಬುಧವಾರವೂ ಮಳೆಯಾಗಿದ್ದು ಹುಬ್ಬಳ್ಳಿಯಲ್ಲಿ 13.5 ಮಿ.ಮೀ, ಛಬ್ಬಿಯಲ್ಲಿ 10.4 ಮಿ.ಮೀ, ಶಿರಗುಪ್ಪಿಯಲ್ಲಿ 19.2 ಮಿ.ಮೀ. ಹಾಗೂ ಬ್ಯಾಹಟ್ಟಿಯಲ್ಲಿ 15.2 ಮಿ.ಮೀ. ಮಳೆಯಾಗಿದೆ’ ಎಂದು ತಹಶೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.

‘ಹುಬ್ಬಳ್ಳಿಯಲ್ಲಿ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ಒಳಗಿದ್ದ ವಸ್ತುಗಳು, ಸರಕು–ಸಾಮಾಗ್ರಿಗಳಿಗೆ ಹಾನಿಯಾಗಿರುವುದೇ ಹೆಚ್ಚು. ಮನೆ ಗೋಡೆ ಕುಸಿತದ ಪ್ರಕರಣಗಳು ತೀರಾ ಕಮ್ಮಿ ಇದ್ದು, ಎಲ್ಲದರ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಇ. ತಿಮ್ಮಪ್ಪ ಹೇಳಿದರು.

ವಿವರ ಸಲ್ಲಿಸಲು ಮೇಯರ್ ಸೂಚನೆ

ದೇಶಪಾಂಡೆ ನಗರ ಹಾಗೂ ಕಾಟನ್ ಮಾರ್ಕೆಟ್‌ನ ಮಳೆ ಹಾನಿ ಪ್ರದೇಶಗಳಿಗೆ ಮೇಯರ್ ಈರೇಶ ಅಂಚಟಗೇರಿ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ರಾಜಕಾಲುವೆಯಲ್ಲಿ ಕಸ ಕಟ್ಟಿಕೊಂಡಿದ್ದನ್ನು ಪರಿಶೀಲಿಸಿದರು. ನಂತರ ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.

‘ಮುಂದೆ ಇಂತಹ ತೊಂದರೆಯಾಗದಂತೆ ಈಗಲೇ ಕ್ರಮ ಕೈಗೊಳ್ಳಬೇಕು. ಗುರುವಾರ ಸಂಜೆಯೊಳಗೆ ಸಾರ್ವಜನಿಕ ಆಸ್ತಿ ಮತ್ತು ಪಾಲಿಕೆ ಆಸ್ತಿ ಹಾನಿಯ ವಿವರವನ್ನು ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ಪಕ್ಷದ ಮುಖಂಡರಾದ ಶಂಕರಣ್ಣ ಮುನವಳ್ಳಿ, ಪ್ರಕಾಶ ಬಾಫನಾ, ರವಿ ಸಾವಕಾರ ಹಾಗೂ ಪ್ರಕಾಶ ಶೃಂಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.