ADVERTISEMENT

10 ಸಾವಿರ ನಿವೇಶನ ಹಂಚಿಕೆ: ನಾಗೇಶ ಕಲಬುರ್ಗಿ ಭರವಸೆ

ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 14:27 IST
Last Updated 28 ಫೆಬ್ರುವರಿ 2020, 14:27 IST
ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗೇಶ ಕಲಬುರ್ಗಿ ಅವರನ್ನು ಸಚಿವ ಜಗದೀಶ ಶೆಟ್ಟರ್‌ ಅಭಿನಂದಿಸಿದರು. ಹುಡಾ ಆಯುಕ್ತ ಎನ್‌.ಎಚ್‌.ಕುಮ್ಮಣ್ಣವರ ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗೇಶ ಕಲಬುರ್ಗಿ ಅವರನ್ನು ಸಚಿವ ಜಗದೀಶ ಶೆಟ್ಟರ್‌ ಅಭಿನಂದಿಸಿದರು. ಹುಡಾ ಆಯುಕ್ತ ಎನ್‌.ಎಚ್‌.ಕುಮ್ಮಣ್ಣವರ ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅವಳಿ ನಗರದಲ್ಲಿ ನಿವೇಶನ ಇಲ್ಲದ ಹಾಗೂ ಸ್ವಂತ ಮನೆ ನಿಲ್ಲದ ಅರ್ಹರನ್ನು ಗುರುತಿಸಿ 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶ ಇದೆ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಭರವಸೆ ನೀಡಿದರು.

ನವನಗರದಲ್ಲಿರುವ ಪ್ರಾಧಿಕಾರದ(ಹುಡಾ) ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ವರ್ಷಗಳಿಂದ ಪ್ರಾಧಿಕಾರದಿಂದ ನಿವೇಶನ ಹಂಚಿಕೆಯಾಗಿಲ್ಲ. ವಿವಿಧ ಯೋಜನೆಗಳಲ್ಲಿ ನಿವೇಶನ ಹಂಚಿಕೆಗೆ ಆದ್ಯತೆ ನೀಡಲಾಗುವುದು ಎಂದರು.

ಸಿಎ ಸೈಟ್‌ ಹಂಚಿಕೆ:ಲಕಮನಹಳ್ಳಿ, ತಡಸಿನಕೊಪ್ಪ ಮತ್ತು ಅಮರಗೋಳದಲ್ಲಿ ಇರುವ ಪ್ರಾಧಿಕಾರದ ಬಡಾವಣೆಯಲ್ಲಿ ಹಂಚಿಕೆಯಾಗದೇ ಉಳಿದಿರುವ ಸುಮಾರು 700 ನಿವೇಶನಗಳನ್ನು ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಸಿಎ ಸೈಟ್‌ಗಳನ್ನು(ನಾಗರಿಕ ನಿವೇಶನಗಳು) ಅರ್ಹ ಸಂಘ, ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಗುಂಪು ಮನೆಗಳ ಯೋಜನೆ:ಪ್ರಾಧಿಕಾರಕ್ಕೆ ಸೇರಿದ ನಿವೇಶನದಲ್ಲಿ ಗುಂಪು ಮನೆಗಳ ಯೋಜನೆಯಡಿ ಮನೆ ನಿರ್ಮಿಸಿ, ಬಡವರಿಗೆ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲು ಭೂಮಿ ಅಗತ್ಯವಿದೆ. ಈಗಾಗಲೇ ಹಲವು ರೈತರು ಭೂಮಿ ನೀಡಲು ಮುಂದೆ ಬಂದಿದ್ದಾರೆ. ಅಂತಹ ರೈತರ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಅಕ್ರಮಕ್ಕೆ ಕಡಿವಾಣ:ಅವಳಿ ನಗರದಲ್ಲಿ ಅಕ್ರಮ ಲೇಔಟ್‌ ಸಮಸ್ಯೆ ತೀವ್ರವಾಗಿದೆ. ಇದಕ್ಕೆ ಕಡಿವಾಣ ಹಾಕುವ ಸಂಬಂಧ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗುವುದು. ಇನ್ನು ಮುಂದೆ ಅಕ್ರಮ ಬಡಾವಣೆಗಳು ತಲೆ ಎತ್ತದಂತೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿಸುವವರು ಎಚ್ಚರ ವಹಿಸಬೇಕು ಎಂದರು.

ಅಭಿನಂದನೆ:ಸಚಿವ ಜಗದೀಶ ಶೆಟ್ಟರ್‌, ಹುಡಾ ಆಯುಕ್ತ ಎನ್‌.ಎಚ್‌.ಕುಮ್ಮಣ್ಣವರ, ಮಾಜಿ ಶಾಸಕ ಅಶೋಕ ಕಾವಟೆ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಎಸ್‌ಎಸ್‌ಕೆ ಸಮಾಜದಿಂದ ಕಲಬುರ್ಗಿ ಅವರನ್ನು ಅಭಿನಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.