ADVERTISEMENT

ನಾನು ನೆಪಮಾತ್ರ, ಇದು ಜನರ ಗೆಲುವು: ಕಿಶನ ರಮೇಶ

ಪಕ್ಷೇತರ ಅಭ್ಯರ್ಥಿಯಾಗಿ ಪಾಲಿಕೆ ಪ್ರವೇಶಿಸಿದ ಕಿಶನ ಬೆಳಗಾವಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 3:25 IST
Last Updated 7 ಸೆಪ್ಟೆಂಬರ್ 2021, 3:25 IST
ಕಿಶನ್‌ ಬೆಳಗಾವಿ
ಕಿಶನ್‌ ಬೆಳಗಾವಿ   

ಹುಬ್ಬಳ್ಳಿ: ‘ನಾನು ನೆಪ ಮಾತ್ರ. ಪಾಲಿಕೆ ಚುನಾವಣೆಯ ಈ ಸಾಧನೆಯ ನಿಜವಾದ ಮಾಲೀಕರು ಜನ. ಇದು ಅವರಿಗೇ ಸಲ್ಲಬೇಕಾದ ಗೌರವ...’

48ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಬೆಳಗಾವಿ ಕಿಶನ ರಮೇಶ ಅವರ ಮಾತುಗಳು ಇವು.

ಗೆಲುವಿನ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅವರು ‘ಕೋವಿಡ್‌ ಸಮಯದಲ್ಲಿ ಕೈಲಾದಷ್ಟು ಜನರಿಗೆ ಸಹಾಯ ಮಾಡಿದ್ದೆ. ಇದನ್ನು ಮೆಚ್ಚಿಕೊಂಡಿದ್ದ ಅವರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹುರಿದುಂಬಿಸಿದರು. ಜನರೇ ಸ್ವ ಇಚ್ಛೆಯಿಂದ ನನ್ನ ಪರ ಪ್ರಚಾರ ಮಾಡಿದರು’ ಎಂದರು.

ADVERTISEMENT

‘ಚುನಾವಣಾ ಪ್ರಚಾರದ ಸಮಯದಲ್ಲಿ ಜನರ ಸಮಸ್ಯೆಗಳು ಗಮನಕ್ಕೆ ಬಂದಿವೆ. ಅವುಗಳ ಬಗ್ಗೆ ಅಧ್ಯಯನ ಮಾಡುತ್ತೇನೆ. ವೈಜ್ಞಾನಿಕ ಕಸ ವಿಲೇವಾರಿ, ರಸ್ತೆ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದಕ್ಕೆ ಆದ್ಯತೆ ನೀಡುತ್ತೇನೆ. ರಾಜಕಾರಣ ನನಗೆ ಹೊಸದಾದ ಕಾರಣ ಮುಂದಿನ ದಿನಗಳಲ್ಲಿ ಅನುಭವಿಗಳ ಸಲಹೆ ಪಡೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ ಎಂದರು.

28 ವರ್ಷದ ಕಿಶನ್‌ ಕೆಎಲ್‌ಇ ಕಾಲೇಜಿನಲ್ಲಿ ಬಿಬಿಎ ಪದವಿ, ಯುನೈಟೆಡ್‌ ಕಿಂಗ್‌ಡಮ್‌ನ ಲೀಡ್ಸ್‌ನಲ್ಲಿ ಎಂಎಸ್‌ಸಿ ಇನ್‌ ಎಂಟರ್‌ಪ್ರೈಸ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.

‘ಮೂರು ತಿಂಗಳ ಹಿಂದೆ ನನಗೆ ರಾಜಕಾರಣವೆಂದರೆ ಏನು ಎಂಬುದೇ ಗೊತ್ತಿರಲಿಲ್ಲ. ಅದರ ಬಗ್ಗೆ ಯೋಚನೆಯೂ ಮಾಡಿರಲಿಲ್ಲ. ಜನ ಪ್ರೋತ್ಸಾಹಿಸಿದ್ದರಿಂದ ಅನಿರೀಕ್ಷಿತವಾಗಿ ಈ ರಂಗಕ್ಕೆ ಬಂದಿದ್ದೇನೆ. ಸವಾಲುಗಳನ್ನು ಎದುರಿಸುತ್ತೇನೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ’ ಎಂದು ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.