ADVERTISEMENT

ನಾನು ಅಪ್ಪಟ ಬಿಜೆಪಿಯ ಮುಖ್ಯಮಂತ್ರಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 11:39 IST
Last Updated 7 ಆಗಸ್ಟ್ 2021, 11:39 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ‘ನಾನು ಅಪ್ಪಟ ಬಿಜೆಪಿ ಕಾರ್ಯಕರ್ತ, ಅಪ್ಪಟ ಬಿಜೆಪಿಯ ಮುಖ್ಯಮಂತ್ರಿ. ನಾನು ಎಂತಹ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದಿದ್ದೇನೆ ಎಂಬುದು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಸಿಎಂ ಬೊಮ್ಮಾಯಿ ಬಿಜೆಪಿಯಲ್ಲಿದ್ದರೂ ಜನತಾ ಪರಿವಾರದವರು’ ಎನ್ನುವ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಅವರು ನಗರದ ವಿಮಾನ ನಿಲ್ದಾಣದಲ್ಲಿ ಹೀಗೆ ಪ್ರತಿಕ್ರಿಯಿಸಿದರು. ‘ಕಳೆದ‌‌ ಹದಿನೈದು ವರ್ಷಗಳಿಂದ ನಾನು ಬಿಜೆಪಿಯಲ್ಲಿ ದುಡಿಯುತ್ತಿದ್ದೇನೆ. ಹೀಗಿದ್ದಾಗ ಜನತಾ ಪರಿವಾರ ಎನ್ನುವ ಪ್ರಶ್ನೆ ಎಲ್ಲಿಯದು? ಎಚ್.ಡಿ. ಕುಮಾರಸ್ವಾಮಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲಿ ಯಾವುದೇ ಮಹತ್ವವಿಲ್ಲ’ ಎಂದರು.

‘ಸಿ.ಎಂ. ಆದ ಕೂಡಲೇ ದೇವೇಗೌಡರ ಭೇಟಿ ಮಾಡುವ ಅಗತ್ಯವೇನಿತ್ತು, ಹೊಂದಾಣಿಕೆ ರಾಜಕೀಯ ನಮಗೆ ಬೇಡ’ ಎಂದು ಹೇಳಿಕೆ ನೀಡಿರುವ ಹಾಸನದ ಶಾಸಕ ಪ್ರೀತಂಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಯಾವುದೋ ಉದ್ವೇಗದಲ್ಲಿ ಪ್ರೀತಂಗೌಡ ಹಾಗೆ ಹೇಳಿದ್ದಾರೆ. ಅವರು ನನ್ನ ಆತ್ಮೀಯ ಯುವ ಸ್ನೇಹಿತ. ನಾನು ದೇವೇಗೌಡರನ್ನು ಭೇಟಿಯಾದ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಹಾಸನದ ಬಿಜೆಪಿ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಪಕ್ಷ ಬೆಳೆದಂತೆ ನಾಯಕತ್ವವೂ ಬೆಳೆಯುತ್ತದೆ. ನಾಯಕರ ಬೆಂಬಲಿಗರಿಗೆ ತಮ್ಮ ನಾಯಕನಿಗೆ ಸಚಿವ ಸ್ಥಾನ ದೊರೆಯಬೇಕು ಎನ್ನುವ ನಿರೀಕ್ಷೆಯೂ ಇರುತ್ತದೆ. ನೆಹರೂ ಒಲೇಕಾರರಿಗೆ ಸಚಿವ ಸ್ಥಾನ ಸಿಗದೆ ಇರುವ ಕುರಿತು ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಆನಂದ ಸಿಂಗ್‌, ತಮಗೆ ನೀಡಿರುವ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಜೊತೆ ಈಗಾಗಲೇ ಮಾತನಾಡಿದ್ದೇನೆ. ಅವರು ಯಾವ ಖಾತೆ ಕೇಳಿದ್ದರು ಎಂದು ಬಹಿರಂಗ ಪಡಿಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.