ADVERTISEMENT

‘ಆಕಾಂಕ್ಷಿಗಳು ‘ನಾಳೆ ಬಾ’ ಬೋರ್ಡ್ ಕಿತ್ತೆಸೆಯಲಿದ್ದಾರೆ’

ಸರ್ಕಾರ ಸ್ಥಿರವಾಗಿದ್ದರೆ ಸಚಿವ ಸಂಪುಟ ವಿಸ್ತರಣೆ ಮಾಡಲಿ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 15:38 IST
Last Updated 14 ಡಿಸೆಂಬರ್ 2018, 15:38 IST
ಆರ್‌. ಅಶೋಕ್
ಆರ್‌. ಅಶೋಕ್    

ಹುಬ್ಬಳ್ಳಿ: ‘ಸಚಿವ ಸಂಪುಟ ವಿಸ್ತರಣೆ ಮಾಡದ ಸಮ್ಮಿಶ್ರ ಸರ್ಕಾರ ಆಕಾಂಕ್ಷಿಗಳನ್ನು ದಾರಿತಪ್ಪಿಸಲು ‘ನಾಳೆ ಬಾ’ ಎಂಬ ಬೋರ್ಡ್ ಹಾಕಿದೆ. 22ಕ್ಕೆ ಸಂಪುಟ ವಿಸ್ತರಣೆ ಆಗದಿದ್ದರೆ ಆ ಬೋರ್ಡ್ ಕಿತ್ತು ಹಾಕಿ ಒಳಗೆ ನುಗ್ಗುವುದು ಖಚಿತ. ಈ ಸರ್ಕಾರ ಸ್ಥಿರವಾಗಿದ್ದರೆ ಸಂಪುಟ ವಿಸ್ತರಣೆ ಮಾಡಲಿ ನೋಡೋಣ’ ಎಂದು ಬಿಜೆಪಿ ಶಾಸಕ ಆರ್‌. ಅಶೋಕ್ ಸವಾಲು ಹಾಕಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ನಾವು ಆಪರೇಷನ್ ಕಮಲ ಮಾಡಲು ಹೋಗುವುದಿಲ್ಲ. ಅವರೇ ಜಗಳವಾಡಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ. ರಮೇಶ ಜಾರಕಿಹೊಳಿ ಮಾತ್ರವಲ್ಲ, ಪಕ್ಷದ ಸಿದ್ಧಾಂತ ಒಪ್ಪಿ ಯಾರಾದರೂ ಬಿಜೆಪಿಗೆ ಬರಬಹುದು’ ಎಂದರು.

‘ರಫೇಲ್ ಅವ್ಯಹಾರದ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸಲು ಹೊರಟ ಕಾಂಗ್ರೆಸ್ ಮುಖಂಡರು ಅದರಲ್ಲೂ ರಾಹುಲ್ ಗಾಂಧಿ ಅವರಿಗೆ ಭಾರಿ ಮುಖಭಂಗವಾಗಿದೆ. ದಾರಿತಪ್ಪಿಸಲು ಯತ್ನಿಸಿದ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದೇಶದ ಭದ್ರತೆ ವಿಷಯದ ಬಗ್ಗೆ ರಾಹುಲ್ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಗಡಿ ಕಾಯುವ ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ ನಾಚಿಕೆಯಿಂದ ತಲೆತಗ್ಗಿಸುವ ಸ್ಥಿತಿಯಲ್ಲಿದೆ. ಆದ್ದರಿಂದ ಸೈನಿಕರ ಕ್ಷಮಾಪಣೆಯನ್ಣೂ ಕೇಳಬೇಕು’ ಎಂದು ಆಗ್ರಹಿಸಿದರು.

‘ರಾಷ್ಟ್ರದ ಸಂವಿಧಾನದ ಪ್ರಕಾರ ಸುಪ್ರೀಂ ಕೋರ್ಟ್‌ಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಜಂಟಿ ಸದನ ಸಮಿತಿಯಲ್ಲಿ ಕೇವಲ 15–20 ಸಂಸದರು ಇರುತ್ತಾರೆ. ಸದನದಲ್ಲಿ ಎಲ್ಲ ಸಂಸದರ ಎದುರು ಚರ್ಚೆ ಮಾಡಲು ಅವಕಾಶ ಇದೆ. ಚರ್ಚೆಗೆ ಬನ್ನಿ ಎಂದರೆ ಕಾಂಗ್ರೆಸ್ ಅದಕ್ಕೂ ತಯಾರಿಲ್ಲ’ ಎಂದರು. ಶಾಸಕ ವಿ. ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.