ADVERTISEMENT

ಜೆಡಿಎಸ್‌ ಟಿಕೆಟ್‌ ನೀಡದಿದ್ದರೆ ಸ್ವತಂತ್ರ ಸ್ಪರ್ಧೆ: ಹಜರತ್‌ ಅಲಿ ಅಲ್ಲಾಸಾಬ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 14:12 IST
Last Updated 24 ಏಪ್ರಿಲ್ 2019, 14:12 IST

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಒಂದು ವೇಳೆ ಪಕ್ಷ ಟಿಕೆಟ್‌ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಹಜರತ್‌ ಅಲಿ ಅಲ್ಲಾಸಾಬ್‌ ಜೊಡಮನಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಚಿಂಚೊಳ್ಳಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಕುಂದಗೋಳ ಕ್ಷೇತ್ರವನ್ನು ಜೆಡಿಎಸ್‌ ಪಡೆದುಕೊಳ್ಳಬೇಕು. ಹಿಂದಿನ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಜೆಡಿಯುನಿಂದ ಸ್ಪರ್ಧಿಸಿ 7,318 ಮತಗಳನ್ನು ಪಡೆದಿದ್ದೆ. ಆದ್ದರಿಂದ ನನಗೇ ಟಿಕೆಟ್‌ ಕೊಡಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರದಲ್ಲಿ ಅನೇಕ ಮೇಳ, ಸಮಾವೇಶಗಳನ್ನು ಸಂಘಟಿಸಿ ಸಾಮಾಜಿಕ ಜೀವನದಲ್ಲಿ ಸಕ್ರಿಯನಾಗಿದ್ದೇನೆ. ಆದ್ದರಿಂದ ಟಿಕೆಟ್‌ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಎಚ್‌. ವಿಶ್ವನಾಥ, ಬಸವರಾಜ ಹೊರಟ್ಟಿ, ವೈ.ಎಸ್‌.ವಿ. ದತ್ತಾ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಹಲವು ಮುಖಂಡರಲ್ಲಿ ಕೇಳಿಕೊಂಡಿದ್ದೇನೆ. ಇನ್ನೆರೆಡು ದಿನಗಳಲ್ಲಿ ಎರಡು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

ADVERTISEMENT

ಪಕ್ಷದ ಪ್ರಮುಖರಾದ ಸಿದ್ದಣ್ಣ ಹೊಳಿ, ಶಂಕರಗೌಡ ದೊಡ್ಡಮನಿ, ಷರೀಫ್‌ ಕಡಗೇರಿ, ಎನ್‌.ಎಫ್‌. ನದಾಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.