ADVERTISEMENT

‘2ಎ’ಗೆ ಸೇರಿಸಲು ಆದಿಬಣಜಿಗರ ಒತ್ತಾಯ

ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 11:30 IST
Last Updated 10 ಡಿಸೆಂಬರ್ 2020, 11:30 IST

ಹುಬ್ಬಳ್ಳಿ: ರಾಜ್ಯದಲ್ಲಿ 20 ಲಕ್ಷ ಜನಸಂಖ್ಯೆ ಹೊಂದಿರುವ ವೀರಶೈವ ಆದಿಬಣಜಿಗ ಸಮಾಜಕ್ಕೆ ಪ್ರವರ್ಗ ‘2ಎ’ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಆರ್‌.ಬಿ. ಶಂಕರಗೌಡರ ಎಚ್ಚರಿಕೆ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಆದಿಬಣಜಿಗ ಸಮಾಜವನ್ನು ಆದಿ ವೀರಶೈವ, ಚತುರ್ಥ ಲಿಂಗಾಯತ ಹೀಗೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಬೀದರ್‌, ಕಲಬುರ್ಗಿ, ವಿಜಯಪುರ, ಚಿಕ್ಕೋಡಿ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದುವರೆಗೆ ಆಡಳಿತ ನಡೆಸಿದ ಯಾವ ಸರ್ಕಾರಗಳು ನಮಗೆ ಮೀಸಲಾತಿ ನೀಡಿಲ್ಲ’ ಎಂದು ದೂರಿದರು.

‘ಮೀಸಲಾತಿ ಸಲುವಾಗಿ ರಚನೆಯಾಗಿದ್ದ ಎಸ್. ಸಿದ್ದಗಂಗಯ್ಯ ಮತ್ತು ಎನ್‌. ಶಂಕ್ರಪ್ಪ ಅವರ ನೇತೃತ್ವದ ಆಯೋಗದ ವರದಿಗಳು ಕೂಡ ಜಾರಿಗೆ ಬಂದಿಲ್ಲ. ಇಷ್ಟು ವರ್ಷಗಳ ಕಾಲ ಎಲ್ಲ ನಾಯಕರಿಗೆ ಮನವಿ ನೀಡಿ ಸಾಕಾಗಿದೆ; ಇನ್ನು ಮುಂದೆ ಯಾರಿಗೂ ಮನವಿ ಕೊಡುವುದಿಲ್ಲ. ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದರು.

ADVERTISEMENT

‘ಕೇಂದ್ರ ಸರ್ಕಾರದಿಂದಲೂ ಮೀಸಲಾತಿ ಕಲ್ಪಿಸಲು ಆದಿಬಣಜಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು, ಸಮಾಜದ ವತಿಯಿಂದ ಕಲಬುರ್ಗಿ, ವಿಜಯಪುರ, ಚಿಕ್ಕೋಡಿ, ಸವದತ್ತಿ, ಹುಬ್ಬಳ್ಳಿ, ಧಾರವಾಡದಲ್ಲಿ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿ ನಿಲಯ ಸ್ಥಾಪಿಸಲು ಉಚಿತ ನಿವೇಶನ ಮತ್ತು ಧನ ಸಹಾಯ ಕೊಡಬೇಕು, ವೀರಶೈವ ಧರ್ಮ ಸಂಸ್ಥಾಪಕರಾದ ಜಗದ್ಗುರು ಆದಿ ರೇಣುಕಾಚಾರ್ಯರ ಜಯಂತಿಯನ್ನು ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಆಚರಿಸಬೇಕು. ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಆದಿ ರೇಣುಕಾಚಾರ್ಯರ ಹೆಸರು ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ವಕ್ತಾರ ಶೇಕಣ್ಣ ಹೈಬತ್ತಿ, ರಾಜ್ಯ ಘಟಕದ ಉಪಾಧ್ಯಕ್ಷ ಎಸ್‌.ಎಸ್‌. ಡಂಗಿ, ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಚನಬಸನಗೌಡ ಪಾಟೀಲ, ಕಾರ್ಯದರ್ಶಿ ವಿರೂಪಾಕ್ಷಪ್ಪ ಕಾರಡಗಿ, ಯುವನಾಯಕ ಕಾರ್ತಿಕಗೌಡ ಆರ್‌.ಎಸ್‌. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.