ADVERTISEMENT

ಸೌಲಭ್ಯಗಳಿದ್ದರಷ್ಟೇ ಭಾರತ ‘ಸೂಪರ್‌ ಪವರ್‌’

ಹೆಲ್ತ್‌ಕಾನ್‌ ಸಮಾವೇಶದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 15:08 IST
Last Updated 3 ನವೆಂಬರ್ 2019, 15:08 IST
‌ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೆಲ್ತ್‌ಕಾನ್‌ ಸಮಾವೇಶದಲ್ಲಿ ಮಾತನಾಡಿದರು
‌ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೆಲ್ತ್‌ಕಾನ್‌ ಸಮಾವೇಶದಲ್ಲಿ ಮಾತನಾಡಿದರು   

ಹುಬ್ಬಳ್ಳಿ: ಭಾರತ 21ನೇ ಶತಮಾನದಲ್ಲಿ ಸೂಪರ್‌ ಪವರ್ ದೇಶ ಆಗಬೇಕೆನ್ನುವ ಕಾರಣಕ್ಕೆ ಹಲವಾರು ಸಾಹಸಗಳನ್ನು ಮಾಡುತ್ತಿದ್ದೇವೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಉತ್ಕೃಷ್ಟ ಆರೋಗ್ಯ ಸೇವೆ ದೊರತರೆ ಮಾತ್ರ ಈ ಗುರಿ ಮುಟ್ಟಲು ಸಾಧ್ಯ. ಇದಕ್ಕೆ ಎಲ್ಲ ವೈದ್ಯರ ಸಹಕಾರ ಅಗತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಡೆನಿಸನ್‌ ಹೋಟೆಲ್‌ನಲ್ಲಿ ಹುಬ್ಬಳ್ಳಿ ಟೈಕಾನ್‌ ಸಂಸ್ಥೆ ಆಯೋಜಿಸಿರುವ ಹೆಲ್ತ್‌ಕಾನ್‌ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ಅವರು ‘ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭಿಸಲು ಜನರಿಕ್‌ ಔಷಧ ಮಳಿಗೆಗಳನ್ನು ತೆರೆಯಲಾಗಿದೆ. ದೇಶದ ಶ್ರೀಮಂತ ಪಡೆಯುವ ಚಿಕಿತ್ಸೆ ಪ್ರತಿಯೊಬ್ಬ ಬಡವನಿಗೂ ಲಭಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಈ ಕಾರಣಕ್ಕಾಗಿ ವಿಶ್ವದ ದೊಡ್ಡ ಅರೋಗ್ಯ ಯೋಜನೆ ಆಯುಷ್ಮಾನ್‌ ಭಾರತವನ್ನು ಆರಂಭಿಸಲಾಗಿದೆ’ ಎಂದರು.

‘50 ವರ್ಷ ವಯಸ್ಸಾದ ನಂತರ ನಿರಂತರವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಮುಂಜಾಗೃತೆ ವಹಿಸಿದರೆ ಎಂಥದ್ದೇ ರೋಗವಿದ್ದರೂ ಚಿಕಿತ್ಸೆ ಪಡೆಯಬಹುದು. ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಹೂಡಿಕೆ ಎರಡೂ ಕಡಿಮೆ ಇರಬಹುದು. ಆದರೆ, ಸಾಕಷ್ಟು ಪ್ರತಿಭಾನ್ವಿತ ವೈದ್ಯರು ಇರುವುದೇ ನಮ್ಮ ದೊಡ್ಡ ಆಸ್ತಿ. ಆದ್ದರಿಂದ ಈ ವರ್ಷ 2,750 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

’ಆರೋಗ್ಯ ಕ್ಷೇತ್ರದ ಸುಧಾರಣೆಗೆ ಏನೇ ಕ್ರಮಗಳು ಹಾಗೂ ಯೋಜನೆಗಳಿದ್ದರೆ ಅವುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಬದ್ಧವಿದೆ. ದೇಶದ ಪ್ರತಿ ಬಡವನಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸಬೇಕು ಎನ್ನುವುದಷ್ಟೇ ನಮ್ಮ ಕಾಳಜಿ. ದೇಶದ ಅತ್ಯುತ್ತಮ ವೈದ್ದರಿಂದ ಭಾರತ ಮೆಡಿಕಲ್‌ ಹಬ್‌ ಬದಲಾಗುತ್ತಿದೆ. ವೈದ್ಯರು ಹೇಳಿದ ಮಾತುಗಳನ್ನು ಜನ ಕೇಳುತ್ತಾರೆ. ಈ ನಿಟ್ಟಿನಲ್ಲಿಯೂ ವೈದ್ಯರು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಡಾ. ಮಹೇಶ ನಾಲವಾಡ ಅವರು ‘ಹೆಲ್ತ್‌ ಎಂಟರ್‌ಪ್ರೈನರ್‌ಗಳಿಗೆ ಮೊದಲು ನೀಡುತ್ತಿದ್ದ ಸಬ್ಸಿಡಿ ಈಗ ಯಾಕೆ ನೀಡುತ್ತಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಖಾಸಗಿ ಆಸ್ಪತ್ರೆಗಳ ಮೇಲೆ ಹೇರಲಾಗುತ್ತದೆ. ಆದರೆ ಸರ್ಕಾರದಿಂದ ಸರಿಯಾಗಿ ಅನುದಾನವೇ ಬರುವುದಿಲ್ಲ’ ಎಂದರು.

ಹೆಲ್ತ್‌ ಕಾನ್‌ನ ಸಂಚಾಲಕ ಡಾ. ಶಂಕರ ಬಿಜಾಪುರ, ಸಂಘಟಕ ಶಶಿಧರ ಶೆಟ್ಟರ್‌, ವೈದ್ಯ ಮಹೇಶ ನಾಲವಾಡ ಸೇರಿದಂತೆ ಅನೇಕ ವೈದ್ಯರು ಪಾಲ್ಗೊಂಡಿದ್ದರು.

ಬಳಿಕ ನಡೆದ ಸಂವಾದದಲ್ಲಿ ಜೋಶಿ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

* ಡಾ ಶರಣ ಪಾಟೀಲ, ಸ್ಪರ್ಶ ಆಸ್ಪತ್ರೆಯ ಸಂಸ್ಥಾಪಕ: ಸರ್ಕಾರದ ಯೋಜನೆಗಳಡಿ ಚಿಕಿತ್ಸೆ ನೀಡಿದರೆ ಆಸ್ಪತ್ರೆಗಳಿಗೆ ಸರ್ಕಾರದಿಂದ ಬೇಗನೆ ಹಣ ಬರುವುದಿಲ್ಲ. ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ನಕಲಿ ದಾಖಲೆಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಏನು ಪರಿಹಾರ?

ಜೋಶಿ: ತಂತ್ರಜ್ಞಾನದ ನೆರವಿನಿಂದ ನಕಲಿ ದಾಖಲೆಗಳ ಹಾವಳಿ ತಡೆಯುವ ಬಗ್ಗೆ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಆಸ್ಪತ್ರೆಗಳಿಗೆ ಕೇಂದ್ರದಿಂದ ಬರಬೇಕಾದ ಹಣ ಬೇಗನೆ ತಲುಪುವಂತೆ ಮಾಡಲು ಆರೋಗ್ಯ ಸಚಿವರ ಜೊತೆ ಚರ್ಚಿಸುವೆ.

* ಡಾ. ರವಿ ಕಲಘಟಗಿ: ಎಂ. ಜೋಶಿ, ಬಿ.ಆರ್‌. ಪಾಟೀಲ ಮತ್ತು ಜಿತೂರಿ ಅವರಂಥ ಶ್ರೇಷ್ಠ ವೈದ್ಯರು ಮೊದಲು ಕಿಮ್ಸ್‌ಗೆ ಹೋಗಿ ಉಚಿತವಾಗಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುತ್ತಿದ್ದರು. ಅದನ್ನು ಈಗಲೂ ಯಾಕೆ ಮುಂದುವರಿಸಬಾರದು?

ಜೋಶಿ: ಇದು ಉತ್ತಮ ವಿಚಾರ. ಈ ಕುರಿತು ಪ್ರಸ್ತಾವ ಸಲ್ಲಿಸುವಂತೆ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಅವರಿಗೆ ಸೂಚಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.