ಕುಂದಗೋಳ: ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಕೆರೆಯಲ್ಲಿ ಈಚೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಅವಳಿ ಮಕ್ಕಳಾದ ಮುಜಮ್ಮೀಲ್ ಶರೀಫಸಾಬ ಚಾಂದಖಾನವರ ಹಾಗೂ ಮುದಸ್ಸಿರ ಶರೀಫಸಾಬ ಚಾಂದ್‌ಖಾನವರ (3) ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ತಮ್ಮ ಫೌಂಡೇಷನ್ ವತಿಯಿಂದ ₹4 ಲಕ್ಷ ನೆರವು ನೀಡದ ಅವರು, ‘ಗ್ರಾಮದ ಕೆರೆಗೆ ತಡೆಗೋಡೆ ಕಟ್ಟಲು ಈ ಹಿಂದೆಯೇ ₹50 ಲಕ್ಷ ಅನುದಾನ ಬಿಡುಗಡೆ ಆಗಿದೆ. ಕಾರಣಾಂತರಗಳಿಂದ ಅನುದಾನ ಬಳಕೆಯಾಗದೆ ಖಜಾನೆಗೆ ಮರಳಿ ಹೋಗಿದೆ. ತಡೆಗೋಡೆ ಕಟ್ಟುವ ಕಾರ್ಯ ಖಂಡಿತ ಆಗುತ್ತದೆ’ ಎಂದರು.
‘ಸಾರ್ವಜನಿಕರು ಮಕ್ಕಳನ್ನು ಕೆರೆಯ ಹತ್ತಿರ ಹೋಗದಂತೆ ಸುರಕ್ಷಿತವಾಗಿ ನೋಡಿಕೊಳ್ಳಬೇಕು’ ಎಂದ ಅವರು, ‘ಕೆರೆಯ ಪಕ್ಕದಲ್ಲಿ ಇರುವ ಅಂಗನವಾಡಿಯನ್ನು ಸ್ಥಳಾಂತರ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ನಾನು ಕೂಡ ಮುಖ್ಯಮಂತ್ರಿ ಜತೆ ಮಾತನಾಡುವೆ’ ಎಂದು ಹೇಳಿದರು.
ಬಳಿಕ ಗ್ರಾಮದ ಕೆರೆ ವೀಕ್ಷಿಸಿ, ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಅಧಿಕಾರಿಗೆ ತರಾಟೆ: ಗ್ರಾಮದ ಸುಂದರಮ್ಮ ಮಡಿವಾಳರ ಎಂಬ ಮಹಿಳೆ ಸಚಿವ ಲಾಡ್ ಅವರ ಬಳಿ, ‘ವಿಧವಾ ವೇತನ, ವೃದ್ಧಾಪ್ಯ ವೇತನ ಯಾವುದೂ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು. ಈ ವಿಚಾರವಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕೂಡಲೆ ಪರಿಶೀಲಿಸುವಂತೆ ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ್ ಪಾಟೀಲ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಶಿವಾನಂದ ಬೆಂತೂರ, ಉಪಾವಿಭಾಗಾಧಿಕಾರಿ ಶಾಲಂ ಹುಸೇನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಮುಂಖಡರಾದ ಚಂದ್ರಶೇಖರ ಜುಟ್ಟಲ್, ಪೋಲಿಸಗೌಡ ಪಾಟೀಲ, ಸಲೀಂ ಕ್ಯಾಲಕೊಂಡ, ಮಂಜುನಾಥ ಬಿಡ್ನಾಳ, ತಾಲ್ಲೂಕು ಪಂಚಾಯಿತಿ ಇಒ ಜಗದೀಶ ಕಮ್ಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಬೇಟದೂರ, ಉಪಾಧ್ಯಕ್ಷೆ ತಾಯವ್ವ ಕೆಂಚಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.