ಧಾರವಾಡ: ‘ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಫಾಸ್ಪರಿಕ್ ಆಮ್ಲದ ಬೆಲೆ ಹೆಚ್ಚು ಇದೆ. ಡಿಎಪಿಗೆ ಪರ್ಯಾಯವಾಗಿ ‘ಕಾಂಪ್ಲೆಕ್ಸ್’, ‘15:15:15’, ‘17:17:17’ ಹಾಗೂ ‘19:19:19’ ಗೊಬ್ಬರ ಬಳಸಬೇಕು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
‘ಪೊಟಾಷ್ ಗೊಬ್ಬರವು ಬೆಳೆಗಳಿಗೆ ರೋಗಬಾಧೆ ತಡೆಗಟ್ಟುತ್ತದೆ, ಕೀಟ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಣ್ಣಿನ ಫಲವತ್ತತೆ ಸಹ ಕಾಪಾಡಿ ಬೆಳೆಗಳಿಗೆ ಪೋಷಾಕಾಂಶ ಒದಗಿಸುತ್ತದೆ. ರೈತರಿಗೆ ಪರ್ಯಾಯ ಗೊಬ್ಬರದ ಬಗ್ಗೆ ತಿಳಿಸಬೇಕು’ ಎಂದರು.
‘ಮಣ್ಣಿನ ಪರೀಕ್ಷೆ ಮಹತ್ವವನ್ನು ಕೃಷಿಕರಿಗೆ ತಿಳಿಸಬೇಕು. ರಾಸಾಯನಿಕಗಳ ಮಿತ ಬಳಕೆ ಹಾಗೂ ನ್ಯಾನೊ ಗೊಬ್ಬರ ಬಳಕೆ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಗೊಂದಲವಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು.
‘ಯಾಂತ್ರೀಕರಣ ಯೋಜನೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಹೊಸ ತಳಿಗಳ ಪ್ರಯೋಜನದ ಬಗ್ಗೆ ರೈತರಿಗೆ ತಿಳಿಸಬೇಕು. ಎಲ್ಲ ಜಿಲ್ಲೆಗಳಲ್ಲೂ ‘ಹಾರ್ವೆಸ್ಟರ್ ಹಬ್’ ಅನುಷ್ಠಾನ ಗೊಳಿಸಬೇಕು. ಬೆಳೆ ವಿಮೆ, ಶೇಂಗಾ ಬೆಳೆಗೆ ಲಘು ಪೋಷಕಾಂಶಗಳ ಬಳಕೆ, ತೊಗರಿ ಬೆಳೆ ಇಳುವರಿ ಹೆಚ್ಚಳ ತಾಂತ್ರಿಕತೆ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ನಿರ್ದೇಶಕ ಜಿ.ಟಿ. ಪುತ್ರ, ಕೃಷಿ ಅಧಿಕಾರಿ ವೆಂಕಟರಮಣ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.