ADVERTISEMENT

ಅಂತರರಾಷ್ಟ್ರೀಯ ಗಾಳಿ ಪಟ ಉತ್ಸವ

ಸಂಗೀತ, ಚಿತ್ರಕಲೆ, ವೈವಿಧ್ಯಮಯ ಆಹಾರ: ಮೋಜು– ಮಸ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 14:37 IST
Last Updated 19 ಜನವರಿ 2019, 14:37 IST

ಹುಬ್ಬಳ್ಳಿ: ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ನಗರದ ಕುಸುಗಲ್ ರಸ್ತೆಯಲ್ಲಿ ಆಕ್ಸ್‌ಫರ್ಡ್ ಕಾಲೇಜಿನ ಹತ್ತಿರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮೈದಾನದಲ್ಲಿ ಇದೇ 22 ಮತ್ತು 23ರಂದು ನಡೆಯಲಿದೆ.

ಸಂಸದ ಪ್ರಹ್ಲಾದ ಜೋಶಿ ಮತ್ತು ಕ್ಷಮತಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಉತ್ಸವದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಬೆಲ್ಜಿಯಂ, ಕೆನಡ, ಟರ್ಕಿ ಸೇರಿದಂತೆ 16 ರಾಷ್ಟ್ರಗಳ ಗಾಳಿ ಪಟ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಗುಜರಾತ್, ಮಹಾರಾಷ್ಟ್ರದ ಸ್ಪರ್ಧಿಗಳ ಗಾಳಿ ಪಟಗಳು ಸಹ ಹಾರಲಿವೆ ಎಂದು ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಣ್ಣ ಬಣ್ಣದ ಹಾಗೂ ಆಕರ್ಷಕ ವಿನ್ಯಾಸದ ಗಾಳಿಪಟಗಳು ಹಾರಾಡಲಿವೆ. ಎಲ್‌ಇಡಿ ಬಲ್ಡ್‌ಗಳಿರುವ ಗಾಳಿಪಟಗಳು ರಾತ್ರಿ ವೇಳೆ ಬಾನಿಗೇರಲಿವೆ. ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುವುದು. ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದರು.

ADVERTISEMENT

ಮಕ್ಕಳು ಹಾಗೂ ಆಸಕ್ತರಿಗೆ ಉಚಿತವಾಗಿ ಗಾಳಿಪಟ ವಿತರಿಸಲಾಗುವುದು. ಎರಡೂ ದಿನಗಳ ಕಾಲ ಕೋರ್ಟ್ ವೃತ್ತದಿಂದ ಉತ್ಸವದ ಸ್ಥಳಕ್ಕೆ ಉಚಿತ ಬಸ್ ವ್ಯವಸ್ಥೆ ಇದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಉಪಾಹಾರದ ವ್ಯವಸ್ಥೆಯೂ ಇದೆ ಎಂದು ಮಾಹಿತಿ ನೀಡಿದರು. ಸಂಸದ ಪ್ರಹ್ಲಾದ ಜೋಶಿ ಅವರು 22ರಂದು ಬೆಳಿಗ್ಗೆ 10.30ಕ್ಕೆ ಉತ್ಸವ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಸಂಚಾಲಕ ಮುರಳೀಧರ ಮಳಗಿ, ದಿನೇಶ್ ಪೈ, ಸಂತೋಷ್ ಚೌಹಾನ್ ಇದ್ದರು. ಆಸಕ್ತರು 98457 64253, 78994 82497 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.