ADVERTISEMENT

ಬಿಜೆಪಿಯಲ್ಲಿ ಗುಂಪುಗಾರಿಕೆ ತಡೆಯಲಿ ನಳಿನ್: ಜಯದೇವ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:01 IST
Last Updated 20 ಫೆಬ್ರುವರಿ 2020, 20:01 IST
ಜಗದೇವ ಗುತ್ತೇದಾರ
ಜಗದೇವ ಗುತ್ತೇದಾರ   

ಕಲಬುರ್ಗಿ:ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ ಗುಂಡುರಾವ ಅವರು ರಾಜೀನಾಮೆ ನೀಡಿದ್ದರೂ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ತಾಕತ್ತು ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗುತ್ತೇದಾರ, ‘ದಿನೇಶ ಗುಂಡುರಾವ ರಾಜೀನಾಮೆ ನೀಡಿರುವುದು ನಿಜ. ಆದರೆ ಇವರ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷರು ಅಂಗೀಕರಿಸಿಲ್ಲ. ಅಲ್ಲದೇ, ಅವರಿಗೇ ಅಧ್ಯಕ್ಷರಾಗಿ ಮುಂದುವರಿಯಲು ಸೂಚನೆ ನೀಡಿದ್ದಾರೆ. ಹೀಗಾಗಿ, ಅಧ್ಯಕ್ಷರ ಸೂಚನೆ ಮೇರೆಗೆ ದಿನೇಶ ಗುಂಡುರಾವ ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯೇ ಇಲ್ಲ ಎಂದ ಮೇಲೆ ಅಧ್ಯಕ್ಷರ ನೇಮಕ ಮಾಡುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕಿಲ್ಲವೆಂಬ ನಳಿನ್‌ಕುಮಾರ್‌ ಹೇಳಿಕೆ ಹಾಸ್ಯಾಸ್ಪದ’ ಎಂದಿದ್ದಾರೆ.

ಕಾಂಗ್ರೆಸ್ ಎಲ್ಲಾ ಜಾತಿ ಜನಾಂಗದವರನ್ನು ತೆಗೆದುಕೊಂಡು ಸಾಮಾಜಿಕವಾಗಿ ನ್ಯಾಯವನ್ನು ನೀಡುತ್ತಿದೆ. ಬಿಜೆಪಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಕೊಮುವಾದಿ ಪಕ್ಷವೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದು ಜಗಜ್ಜಾಹಿರವಾಗಿದೆ. ಅದೇ ರೀತಿ ಬಿಜೆಪಿಯಲ್ಲಿ ಆಂತರೀಕ ಅಪಸ್ವರ ಹೆಚ್ಚಾಗಿದೆ. ಅದನ್ನು ಸರಿಪಡಿಸಿ ರಾಜ್ಯದ ಜನತೆಗೆ ಉಪಯೋಗವಾಗುವಂತಹ ಹೊಸ ಹೊಸ ಯೋಜನೆಗಳು ಜಾರಿಗೆ ತರಲು ಅಭಿವೃದ್ಧಿ ಕಾಮಗಾರಿಗಳ ಕಡೆಗೆ ಗಮನ ಹರಿಸಲು ಸಚಿವರು ಮತ್ತು ಶಾಸಕರುಗಳಿಗೆ ತಿಳಿಸುವುದನ್ನು ಬಿಟ್ಟು ತಮ್ಮ ತಮ್ಮಲ್ಲೇ ಗುಂಪುಗಾರಿಕೆ ಮಾಡಿಕೊಂಡು ಜಗಳವಾಡುವುದನ್ನು ನಳಿನ್‌ಕುಮಾರ್ ಸುಮ್ಮನೇ ನೋಡುತ್ತಾ ಕುಳಿತಿದ್ದಾರೆ. ಮೊದಲು ತಮ್ಮ ಪಕ್ಷವನ್ನು ಸರಿಯಾಗಿ ಮುನ್ನಡೆಸಲಿ ಎಂಟು ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.