ADVERTISEMENT

ಹುಬ್ಬಳ್ಳಿ: ಸಿದ್ಧಾರೂಢರ ಜಲರಥೋತ್ಸವ ಸಂಭ್ರಮ

ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ: ಮಠಕ್ಕೆ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:09 IST
Last Updated 14 ಆಗಸ್ಟ್ 2022, 3:09 IST
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶನಿವಾರ ಸಿದ್ಧಾರೂಢರ 93ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಸಂಜೆ ಮಠಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು
ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶನಿವಾರ ಸಿದ್ಧಾರೂಢರ 93ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಸಂಜೆ ಮಠಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು   

ಹುಬ್ಬಳ್ಳಿ: ನಗರದ ಸಿದ್ಧಾರೂಢಸ್ವಾಮಿ ಮಠದ ಕೆರೆಯಲ್ಲಿ ಸಿದ್ಧಾರೂಢರ 93ನೇ ಪುಣ್ಯಾರಾಧನೆ ಅಂಗವಾಗಿ ಜಲರಥೋತ್ಸವ ಭಕ್ತರ ಸಮ್ಮುಖದಲ್ಲಿ ಶನಿವಾರ ಜರುಗಿತು. ಜಲರಥೋತ್ಸವ ವೀಕ್ಷಣೆಗೆ ಕೆರೆಯ ಸುತ್ತ ಸಾವಿರಾರು ಭಕ್ತರು ನೆರೆದಿದ್ದರು.

ಬಿದಿರಿನಿಂದ ಸಿದ್ಧಪಡಿಸಿದ್ದ ತೇರಿನಲ್ಲಿ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಪೂಜೆ ಸಲ್ಲಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರು ಪುಷ್ಕರಣಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಡೋಲು ಮತ್ತು ಹಲಗೆ ವಾದನ ಜಲರಥೋತ್ಸವದ ಕಳೆ ಹೆಚ್ಚಿಸಿತು. ಉತ್ಸವಮೂರ್ತಿ ಕೆರೆಯಂಗಳಕ್ಕೆ ಬರುತ್ತಿದ್ದಂತೆ ಭಕ್ತರು ಓಂ ನಮಃ ಶಿವಾಯ, ಸಿದ್ಧಾರೂಢ ಸ್ವಾಮೀಜಿಗೆ ಶರಣು ಎಂದು ಘೋಷಣೆ ಹಾಕಿದರು. ಭಕ್ತರು ಸಿದ್ಧಾರೂಢರ ಕುರಿತ ಪ್ರತಿ ಹಾಡಿಗೂ ದನಿಗೂಡಿಸಿ ಭಕ್ತಿ ಮೆರೆದರು.

ADVERTISEMENT

ಸಿದ್ಧಾರೂಢರ ಪುಣ್ಯಾರಾಧನೆ ಅಂಗವಾಗಿ ಪಾದಯಾತ್ರೆ ಮೂಲಕ ಜನರು ತಂಡೋಪತಂಡವಾಗಿ ಮಠಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ಕೈಲಾಸ ಮಂಟಪ, ಸಮಾಧಿ ಮಂದಿರ ದರ್ಶನ ಪಡೆದರು. ಅಷ್ಟದಿಕ್ಕುಗಳಲ್ಲೂ ಶಿವನಾಮ ಸ್ಮರಣೆ ಮೊಳಗಿತು.

ಮಠದ ಮುಖ್ಯ ಆಡಳಿತ ಅಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಜಿ. ಶಾಂತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಜಿಲ್ಲಾ ನ್ಯಾಯಾಧೀಶ ಜಿ.ಎ. ಮೂಲಿಮನಿ, ಟ್ರಸ್ಟ್‌ ಸಮಿತಿ ಚೇರ್ಮನ್‌ ಧರಣೇಂದ್ರ ಜವಳಿ, ಉಪಾಧ್ಯಕ್ಷ ಗೋವಿಂದ ಮನ್ನೂರ್, ಗೌರವ ಕಾರ್ಯದರ್ಶಿ ಎಸ್.ಐ.ಕೋಳಕೂರ ‌ಇದ್ದರು.

ರಥೋತ್ಸವಕ್ಕೆ ತಿರಂಗಾ ಮೆರುಗು: ಸಿದ್ಧಾರೂಢರ ತೆಪ್ಪೋತ್ಸವದ ಅಲಂಕಾರದಲ್ಲಿ ಈ ಬಾರಿ ತ್ರಿವರ್ಣ ಧ್ವಜದ ಮೆರುಗು ಕಾಣಿಸಿತು. ರಥದ ಮೇಲೆ ಹಾಗೂ ನಾಲ್ಕೂ ಕಡೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ಅಲ್ಲದೆ, ರಾಷ್ಟ್ರಧ್ವಜದಲ್ಲಿ ಬಳಸುವ ಬಣ್ಣದ ಹೂವಿನ ಅಲಂಕಾರ ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.