ಹುಬ್ಬಳ್ಳಿ: ಕರಾವಳಿಯ ಸಂಸ್ಕೃತಿ ಮತ್ತು ಆಹಾರ ಪರಿಚಯಿಸಲು ಹುಬ್ಬಳ್ಳಿಯ ರೋಟರಿ ಕ್ಲಬ್ ಮಿಡ್ ಟೌನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಮಿಡ್ ಟೌನ್ ಮೇ 1 ರಿಂದ 3ರವರೆಗೆ ನಗರದ ಹೊಸ ಕೋರ್ಟ್ ಹಿಂಭಾಗದಲ್ಲಿನ ಕಲ್ಲೂರ ಬಡಾವಣೆ ಮೈದಾನದಲ್ಲಿ ‘ಕರಾವಳಿ ಉತ್ಸವ’ ಹಮ್ಮಿಕೊಂಡಿದೆ.
ಮೂರು ದಿನ ನಡೆಯುವ ಈ ಉತ್ಸವದಲ್ಲಿ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಲಾವಿದರು ಪಾಲ್ಗೊಳ್ಳುವರು. ವಿವಿಧ ಕಾರ್ಯಕ್ರಮ ಪ್ರದರ್ಶಿಸುವರು.
ಮೇ 1ರಂದು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಮಹಿಳಾ ಕಲಾವಿದರು ‘ಮಂದಾಮರ್ತಿ ಮಹಾತ್ಮೆ’ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ. ಉಡುಪಿಯ 15 ಮಂದಿ ಚಂಡೆ ಕಲಾವಿದರು ಸಾಂಪ್ರದಾಯಿಕವಾಗಿ ಚಂಡೆ ಬಾರಿಸಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ನರ ಶಾರ್ದೂಲ’ ಯಕ್ಷಗಾನ ಪ್ರದರ್ಶನ ಹಾಗೂ ದಸರಾ ಸಂದರ್ಭ ಮಂಗಳೂರಿನಲ್ಲಿ ನಡೆಯುವ ಪಿಲಿ ನೃತ್ಯ ಪ್ರದರ್ಶನ ಸಹ ನಡೆಯಲಿದೆ.
ಉತ್ಸವದಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ಪದಾರ್ಥಗಳು ‘ಲೈವ್ ಫುಡ್ ಕೌಂಟರ್’ಗಳು ಪ್ರದರ್ಶನವಾಗಲಿವೆ. ಮಾಂಸಾಹಾರ ವಿಭಾಗದಲ್ಲಿ ವಿವಿಧ ಬಗೆಯ ಮೀನುಗಳ ಹಾಗೂ ಏಡಿ, ಟೈಗರ್ ಫ್ರಾನ್ಸ್‌ನಿಂದ ತಯಾರಿಸಿದ ಕರಾವಳಿ ಶೈಲಿಯ ವಿವಿಧ ಪದಾರ್ಥಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿದೆ.
ಸಸ್ಯಾಹಾರ ವಿಭಾಗದಲ್ಲಿ ಹಲಸಿನಕಾಯಿ ಮತ್ತು ಮಾವಿನ ಹಣ್ಣು–ಕಾಯಿಯಿಂದ ಮಾಡಿದ ಗುಜ್ಜೆ, ಹಲ್ವಾ, ಹಪ್ಪಳ, ಚಿಪ್ಸ್ ಹಾಗೂ ಕರಾವಳಿಯ ಸಾಂಬಾರು ಪುಡಿ, ತಂಬುಳಿ, ಕಾಯಿ ಚಟ್ನಿ ಸೇರಿ ವಿವಿಧ ಪದಾರ್ಥಗಳು ಆಹಾರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 15 ಬಗೆಯ ಗೋಲಿ ಸೋಡಾ ಸಹ ಉತ್ಸವದಲ್ಲಿ ಇರಲಿದೆ.
Quote - ನಮ್ಮ ಸಂಸ್ಥೆ ಕೇವಲ ಸಮಾಜ ಸೇವೆಯಷ್ಟೇ ಅಲ್ಲ ಸಾಂಸ್ಕೃತಿ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸುತ್ತದೆ. ಕರಾವಳಿ ಉತ್ಸವದ ಮೂಲಕ ಹುಬ್ಬಳ್ಳಿ ಜನತೆಗೆ ಕರಾವಳಿ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೇವೆ ದಿನೇಶ ಶೆಟ್ಟಿ ಅಧ್ಯಕ್ಷ ಹುಬ್ಬಳ್ಳಿ ರೋಟರಿ ಕ್ಲಬ್ ಆಪ್ ಮಿಡ್ ಟೌನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.