ADVERTISEMENT

ಅರವಿಂದ ಬೆಲ್ಲದಗೆ ಸಚಿವ ಸ್ಥಾನ ತಪ್ಪಲು ಶೆಟ್ಟರ್, ಜೋಶಿ ಕಾರಣ: ಮಹಾದೇವಪ್ಪ ಪೂಜಾರಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 8:02 IST
Last Updated 4 ಆಗಸ್ಟ್ 2021, 8:02 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ    

ಹುಬ್ಬಳ್ಳಿ: ‘ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆ ಕಾಮಗಾರಿ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಅವರಿಗೆ ಸಚಿವ ಸ್ಥಾನ ಕೈ ತಪ್ಪುವಂತೆ ಮಾಡಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಬಿಜೆಪಿ ರೈತ ಮೋರ್ಚಾ ಘಟಕದ ಅಧ್ಯಕ್ಷ ಮಹಾದೇವಪ್ಪ ಪೂಜಾರಿ ಆರೋಪಿಸಿದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದೆ ಇರಲು ಶಾಸಕ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ. ಬೆಲ್ಲದ ಅವರು ಸಚಿವರಾದರೆ, ತಾವು ತೆರೆಮರೆಗೆ ಸರಿಯಬಹುದು ಎನ್ನುವ ಆತಂಕ ಅವರಲ್ಲಿತ್ತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಗದೀಶ ಶೆಟ್ಟರ್‌ ಅವರು ಸಚಿವ ಸ್ಥಾನ ಬೇಡ ಎಂದಾಗ, ಅರವಿಂದ ಬೆಲ್ಲದ ಅವರಿಗೆ ಬೆಂಬಲ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ರಾಜಕೀಯ ನಡೆದಿದ್ದು, ಬಿಜೆಪಿ ಹೈಕಮಾಂಡ್‌ ನಡೆಯೇ ಪ್ರಶ್ನಿಸುವಂತಾಗಿದೆ. ಇದನ್ನು ವಿರೋಧಿಸಿ ಶೀಘ್ರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ. ಅಗತ್ಯವಿದ್ದರೆ ಜಗದೀಶ ಶೆಟ್ಟರ್‌, ಪ್ರಲ್ಹಾದ ಜೋಶಿ ನಿವಾಸದ ಎದುರು ಸಹ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಪಕ್ಷದ ನಿಷ್ಠಾವಂತ ಹಾಗೂ ಅಭಿವೃದ್ಧಿಪರ ಚಿಂತಕರಾದ ಬೆಲ್ಲದ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದರಿಂದ, ಮಹಾನಗರ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಲಿದೆ. ಪಕ್ಷ ಕವಲೊಡೆದು ಮುಖಂಡರ ನಡುವೆ ಅಸಮಾಧಾನ ಸೃಷ್ಟಿಯಾಗಲಿದೆ. ಅಲ್ಲದೆ, ಇದು ಹುಧಾ ಮಹಾನಗರ ಪಾಲಿಕೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ’ ಎಂದರು.

ಗೋಕುಲ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಹನುಮಂತ ಉಣಕಲ್‌, ಮಾರುತಿ ಉಣಕಲ್‌, ಬಾಲಪ್ಪ ಬಾದಾಮಿ, ಶೇಖರಗೌಡ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.