ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಕೆಲ ಕೋರ್ಸ್‌ಗಳನ್ನು ವಿದ್ಯಾರ್ಥಿಗಳ ಕೊರತೆ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುನ್ಮಾನ ಮಾಧ್ಯಮ (ಎಲೆಕ್ಟ್ರಾನಿಕ್ ಮೀಡಿಯಾ) ಕೋರ್ಸ್ ಅನ್ನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸ್ ಜತೆ ವಿಲೀನಗೊಳಿಸಲಾಗಿದೆ.
2024–25ನೇ ಶೈಕ್ಷಣಿಕ ವರ್ಷದಲ್ಲಿ ‘ವಿದೇಶಿ ಭಾಷೆಗಳು’ (ಫ್ರೆಂಚ್, ಜರ್ಮನ್, ರಷ್ಯನ್), ಮರಾಠಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ದಾಖಲಾಗಿಲ್ಲ. ಕೆಲ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿ ದಾಟಿಲ್ಲ. ಸಂಸ್ಕೃತ, ಅನ್ವಯಿಕ ತಳಿವಿಜ್ಞಾನ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಸಾರ್ವಜನಿಕ ಆಡಳಿತ ಸೇರಿ ಕೆಲ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಸಿದಿದೆ.
ಹಲವು ಕೋರ್ಸ್‌ಗಳ ಒಟ್ಟು ಸೀಟುಗಳಲ್ಲಿ ಅರ್ಧದಷ್ಟು ಖಾಲಿ ಇವೆ. ಕಲಾ ವಿಭಾಗದ (10 ಕೋರ್ಸ್) ಒಟ್ಟು 508 ಸೀಟುಗಳಿಗೆ ಸುಮಾರು 250, ವಿಜ್ಞಾನ ವಿಭಾಗದ (16 ಕೋರ್ಸ್) ಒಟ್ಟು 889 ಸೀಟುಗಳಿಗೆ 650, ಸಮಾಜವಿಜ್ಞಾನ ವಿಭಾಗದ (12 ಕೋರ್ಸ್) ಒಟ್ಟು 686 ಸೀಟುಗಳಿಗೆ 450 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ, ವ್ಯವಹಾರ ನಿರ್ವಹಣೆ (ಎಂಬಿಎ), ಕಾನೂನು (ಎಲ್‌ಎಲ್‌ಎಂ), ಎಂ.ಪಿ.ಇಡಿ, ಎಂ.ಕಾಂ ಕೋರ್ಸ್‌ಗಳ ಸೀಟುಗಳು ಭರ್ತಿಯಾಗಿವೆ.
‘ಕೆಲವು ಕೋರ್ಸ್‌ಗಳಿಗೆ ದಾಖಲಾಗಲು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಇನ್ನು ಕೆಲವು ಕೋರ್ಸ್‌ಗೆ ಶುಲ್ಕ ಜಾಸ್ತಿ ಇದೆ. ಹೀಗಾಗಿ ದಾಖಲಾಗಿಲ್ಲ. ಹೆಚ್ಚುವರಿ ಶುಲ್ಕ ಕೋಟಾದ ಸೀಟುಗಳು ಬಹುತೇಕ ಖಾಲಿ ಉಳಿಯುತ್ತವೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಮೃತ ಮಹೋತ್ಸವದ ವರ್ಷಾಚರಣೆಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಕಷ್ಟ, ಕಾಯಂ ಬೋಧಕರ ಕೊರತೆ ಮೊದಲಾದ ಸಮಸ್ಯೆಗಳು ಕಾಡುತ್ತಿವೆ. ಹಲವು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಕೊರತೆಯೂ ಇದೆ’ ಎಂದರು.
- ‘ಪಿ.ಜಿ ಅಧ್ಯಯನಕ್ಕೆ ನಿರಾಸಕ್ತಿ’ ‘
ಪದವಿ ಕಾಲೇಜುಗಳಲ್ಲೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಆರಂಭವಾಗಿವೆ. ಹಾವೇರಿ ಗದಗ ಸೇರಿ ಅಕ್ಕಪಕ್ಕದ ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯಗಳು ಸ್ಥಾಪನೆ ಆಗಿವೆ. ಅದಕ್ಕೆ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಧಾರವಾಡಕ್ಕೆ ಬರುವವರ ಸಂಖ್ಯೆ ಇಳಿದಿದೆ. ಹೆಚ್ಚಿನ ಪ್ರೋತ್ಸಾಹ ಉದ್ಯೋಗಾವಕಾಶ ಇಲ್ಲ ಎಂಬ ಕಾರಣಕ್ಕೆ ಕಲಾ ವಿಭಾಗದ ಕೆಲ ಕೋರ್ಸ್‌ಗಳಿಗೆ ದಾಖಲಾಗಲು ವಿದ್ಯಾರ್ಥಿಗಳು ಆಸಕ್ತಿ ತೋರಲ್ಲ. ವ್ಯವಹಾರ ನಿರ್ವಹಣೆ ವಾಣಿಜ್ಯ ವಿಜ್ಞಾನ ಕೋರ್ಸ್‌ಗಳಿಗೆ ದಾಖಲಾತಿ ಚೆನ್ನಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ (ಆಡಳಿತ) ಕುಲಸಚಿವ ಎ.ಚನ್ನಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.