ADVERTISEMENT

ಇ–ಸ್ವತ್ತು ಸಮಸ್ಯೆ ಬಗೆಹರಿಸಲು ಕೆಸಿಸಿಐ ಮನವಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:34 IST
Last Updated 1 ಏಪ್ರಿಲ್ 2025, 14:34 IST

ಹುಬ್ಬಳ್ಳಿ: ಕೈಗಾರಿಕಾ ಪ್ರದೇಶಗಳಲ್ಲಿ ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗಿರುವ ನಿವೇಶನಗಳಿಗೆ ಇ–ಸ್ವತ್ತು ನೀಡಲು ಸಾಕಷ್ಟು ತಾಂತ್ರಿಕ ತೊಂದರೆಗಳು ಎದುರಾಗಿವೆ. ಇದರ ಜೊತೆಗೆ ಅವಳಿ ನಗರದಲ್ಲಿ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಬೇಗನೆ ಇತ್ಯರ್ಥಪಡಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಇಲ್ಲಿನ ಜೆ.ಸಿ. ನಗರದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್‌.ಪಿ. ಸಂಶಿಮಠ, ‘ಈ ಸಮಸ್ಯೆ ರಾಜ್ಯದೆಲ್ಲೆಡೆ ಇದೆ. ಹುಬ್ಬಳ್ಳಿ– ಧಾರವಾಡದ  ಗೋಕುಲ ಕೈಗಾರಿಕಾಭಿವೃದ್ಧಿ  ಪ್ರದೇಶ 2ನೇ ಹಂತ,  ತಾರಿಹಾಳ, ಗಾಮನಗಟ್ಟಿ, ಲಕ್ಕಮ್ಮನಹಳ್ಳಿ, ಬೇಲೂರಿನಲ್ಲಿರುವ  ಕೈಗಾರಿಕಾಭಿವೃದ್ಧಿ ಪ್ರದೇಶ ಇನ್ನೂ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಕೆಐಎಡಿಬಿ ನಿರ್ವಹಿಸುತ್ತಿದೆ. ಹೀಗಾಗಿ ಇ–ಸ್ವತ್ತು ದೊರೆಯುತ್ತಿಲ್ಲ. ಇದರಿಂದಾಗಿ ಉದ್ದಿಮೆದಾರರಿಗೆ ಸಾಲಸೌಲಭ್ಯ ದೊರೆಯುತ್ತಿಲ್ಲ’ ಎಂದು ಹೇಳಿದರು.

‘ಇ–ಸ್ವತ್ತು ಇಲ್ಲದಿದ್ದರಿಂದಾಗಿ ಕೈಗಾರಿಕಾ ಚಟುವಟಿಕೆಗಳು ಕುಂಠಿತಗೊಂಡಿವೆ. ಉದ್ದಿಮೆದಾರರಿಗೆ ಆರ್ಥಿಕ ಹೊರೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ  ಕೈಗಾರಿಕೆಗಳ ಕಾರ್ಯಾಚರಣೆಯು ಸ್ಥಗಿತಗೊಳ್ಳುವ ಅಪಾಯವಿದೆ. ಕೂಡಲೇ ಕೈಗಾರಿಕಾ ಪ್ರದೇಶಗಳ ನಿವೇಶನಗಳಿಗೂ ಇ–ಸ್ವತ್ತು ಕೊಡಿಸಲು ಕ್ರಮಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಮಾತನಾಡಿ, ‘ಅವಳಿ ನಗರ ಮಧ್ಯೆದ ಬಿಆರ್‌ಟಿಎಸ್‌ ಕಾರಿಡಾರ್‌ನಿಂದಾಗಿ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಪರೀತ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಅದಕ್ಕಾಗಿ  ಬಿಆರ್‌ಟಿಎಸ್‌ ಕಾರಿಡಾರ್‌ ತೆಗೆದುಹಾಕಿ, ಎಲ್ಲ ವಾಹನಗಳಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಸಂಸ್ಥೆಯ ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಮಾತನಾಡಿ, ‘ಅವಳಿ ನಗರದಲ್ಲಿ ಸೈಬರ್‌ ಅಪರಾಧಗಳು ಹಾಗೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್‌ ಠಾಣೆ ತೆರೆಯಬೇಕು ಹಾಗೂ ಪೊಲೀಸ್‌ ಸಿಬ್ಬಂದಿ ನೇಮಿಸಬೇಕು’ ಎಂದು ಕೋರಿದರು.

‘ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈಓವರ್‌ ಕಾಮಗಾರಿ ವಿಳಂಬವಾಗಿರುವುದರಿಂದ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಕೂಡಲೇ ಚುರುಕುಗೊಳಿಸಿ, 2–3 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಅಗತ್ಯ ಸಹಕಾರ ನೀಡಲು ವ್ಯಾಪಾರಸ್ಥರು ಸಿದ್ಧರಿದ್ದಾರೆ’ ಎಂದು ಹೇಳಿದರು.

‘ಇವೆಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲು ಸದ್ಯದಲ್ಲಿಯೇ ಬೆಂಗಳೂರಿಗೆ ಉದ್ಯಮಿಗಳ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ಇದೇ ಸಂದರ್ಭದಲ್ಲಿ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ,ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕೂಡ ಭೇಟಿ ಮಾಡಿ, ಮನವಿ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.