ADVERTISEMENT

‘ಬೆನ್ನುಹುರಿಗೆ ಕೀ ಹೋಲ್‌ ಶಸ್ತ್ರಚಿಕಿತ್ಸೆ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 16:22 IST
Last Updated 31 ಜನವರಿ 2022, 16:22 IST

ಹುಬ್ಬಳ್ಳಿ: ‘ಬೆನ್ನುಹುರಿ ತೊಂದರೆಯಿಂದ ಬಳಲುತ್ತಿದ್ದ 34 ವರ್ಷದ ವ್ಯಕ್ತಿಗೆ ಸೊಂಟದ ಭಾಗದಲ್ಲಿ ಕೇವಲ 1.5 ಸೆಂ.ಮೀ. ಹೋಲ್‌ ಮಾಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ಬಾಲಾಜಿ ಆಸ್ಪತ್ರೆಯ ಚೇರ್ಮನ್‌ ಹಾಗೂ ನರರೋಗ ತಜ್ಞ ಕ್ರಾಂತಿಕಿರಣ ಹೇಳಿದರು.

ಕ್ರಾಂತಿಕಿರಣ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅವಿನಾಶ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆನ್ನುಹುರಿ ಸಮಸ್ಯೆಯಿಂದಾಗಿ ಆ ವ್ಯಕ್ತಿಗೆ ಸರಿಯಾಗಿ ನಡೆದಾಡಲೂ ಸಾಧ್ಯವಾಗದೆ ಯಾತನೆ ಅನುಭವಿಸುತ್ತಿದ್ದರು. ಹಲವು ಪರೀಕ್ಷೆಗಳ ಬಳಿಕ ಸೊಂಟದ ಭಾಗದಿಂದ ಕಾಲುಗಳಿಗೆ ಹೋಗುವ ನರಗಳ ಮೇಲೆ ಒತ್ತಡ ಬಿದ್ದು ಸೋಂಟ ನೋವು, ಚಿಪ್ಪೆ ಭಾಗದಲ್ಲಿ ನೋವು, ಕಾಲುಗಳಲ್ಲಿ ಸೆಳೆತ ಮತ್ತು ಸ್ಪರ್ಶ ಜ್ಞಾನ ಕಡಿಮೆಯಾಗುತ್ತಿರುವ ಅಂಶಗಳು ಬೆಳಕಿಗೆ ಬಂದವು. ಮೈಕ್ರೊಸ್ಕೋಪ್ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ‘ಮಿನಿಮಲ್‌ ಇನ್‌ ವೆನ್‌ ಸ್ಯೂ ಮೈಕ್ರೊಪಿಸ್ಕೋಪಿಕ್‌ ಟೂಬಿಲರ್‌ ಲಂಬಾರ್‌ ಡಿಸ್‌ ಟೆಕ್ಟಲೊ’ ಎನ್ನಲಾಗುತ್ತದೆ’ ಎಂದರು.

ADVERTISEMENT

‘ಒಂದು ತಾಸಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮೈಕ್ರೋಸ್ಕೋಪಿ ಮೂಲಕ ಚಿಕಿತ್ಸೆಗೆ ಒಳಗಾಗುವ ರೋಗಿಗೆ ದೇಹದ ಭಾಗದಲ್ಲಿ ಹೆಚ್ಚಿನ ಗಾಯಗಳಾಗುವುದಿಲ್ಲ. ಶಸ್ತ್ರಚಿಕಿತ್ಸೆ ಸಮಯದಲ್ಲಿಯೂ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಹರಿದುಹೋಗುವುದನ್ನು ತಪ್ಪಿಸಬಹುದು. ವಾರ ವಿಶ್ರಾಂತಿ ಪಡೆದು ಎಂದಿನ ಕಾಯಕಕ್ಕೆ ಮರಳಬಹುದು’ ಎಂದರು.

ಒಮ್ಮೆ ಚಿಕಿತ್ಸೆಗೆ ಒಳಗಾದರೆ ಮತ್ತೆ ಇದೇ ಸಮಸ್ಯೆ ಎದುರಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ, ‘10 ವರ್ಷಗಳಲ್ಲಿ ಶೇ 10ರಷ್ಟು ಜನರಿಗೆ ಮಾತ್ರ ಈ ಸಮಸ್ಯೆ ಪುನರಾವರ್ತನೆ ಆಗಬಹುದು. ಬೆನ್ನುಹುರಿ ಸಮಸ್ಯೆಯಾದ ಜಾಗಕ್ಕೇ ಮತ್ತೆ ತೊಂದರೆಯಾಗುವುದು ಅತೀ ವಿರಳ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.