ADVERTISEMENT

ನಿರುದ್ಯೋಗಕ್ಕೆ ಖಾದಿ ಗ್ರಾಮೋದ್ಯೋಗದಲ್ಲಿದೆ ಪರಿಹಾರ

ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST
ಡಾ. ಸಂಜೀವ ಕುಲಕರ್ಣಿ, ಮೋಹನ ಹಿರೇಮನಿ, ಬೀರಪ್ಪ ಖಂಡೇಕರ, ಎಂ. ಜಗನ್ನಾಥರಾವ್ ಹಾಗೂ ಇತರ ಗಣ್ಯರು ಮಳಿಗೆಯೊಂದಕ್ಕೆ ಭೇಟಿ ನೀಡಿ ಖಾದಿ ಬಟ್ಟೆಯನ್ನು ವೀಕ್ಷಿಸಿದರು
ಡಾ. ಸಂಜೀವ ಕುಲಕರ್ಣಿ, ಮೋಹನ ಹಿರೇಮನಿ, ಬೀರಪ್ಪ ಖಂಡೇಕರ, ಎಂ. ಜಗನ್ನಾಥರಾವ್ ಹಾಗೂ ಇತರ ಗಣ್ಯರು ಮಳಿಗೆಯೊಂದಕ್ಕೆ ಭೇಟಿ ನೀಡಿ ಖಾದಿ ಬಟ್ಟೆಯನ್ನು ವೀಕ್ಷಿಸಿದರು   

ಹುಬ್ಬಳ್ಳಿ: ‘ಖಾದಿಯನ್ನು ಕೇವಲ ಬಟ್ಟೆಯಾಗಲ್ಲದೆ, ತತ್ವ ಮತ್ತು ಸಿದ್ಧಾಂತವಾಗಿ ನೋಡಬೇಕು. ಹಾಗಾಗಿಯೇ, ಗಾಂಧೀಜಿ ಖಾದಿಗೆ ಹೆಚ್ಚು ಮಹತ್ವ ನೀಡಿದ್ದರು. ಇಂದಿನ ನಿರುದ್ಯೋಗ ಸಮಸ್ಯೆಗೆ ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ಪರಿಹಾರವಿದೆ’ ಎಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯಪಟ್ಟರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ ಹಾಗೂ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಸಹಯೋಗದಲ್ಲಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ, ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ರೋಟಿ (ಆಹಾರ), ಕಪಡಾ (ಬಟ್ಟೆ), ಮಕಾನ್ (ವಸತಿ) ನೀಡುವುದಕ್ಕೆ ಸರ್ಕಾರಗಳು ಹೆಚ್ಚು ಒತ್ತು ನೀಡುತ್ತಿವೆ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಆತನಿಗೆ ಉದ್ಯೋಗ ಕೊಟ್ಟರೆ, ಆ ಮೂರು ಅಗತ್ಯಗಳನ್ನು ಸ್ವತಃ ಪೂರೈಸಿಕೊಳ್ಳಬಲ್ಲ. ಖಾದಿ ಮತ್ತು ಗ್ರಾಮೋದ್ಯೋಗವು ಈ ಮೂರನ್ನೂ ಒದಗಿಸಬಲ್ಲದು’ ಎಂದರು.

ADVERTISEMENT

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ಎಂ. ಜಗನ್ನಾಥರಾವ್ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಕಳೆದ ವರ್ಷ ಆಯೋಜಿಸಿದ್ದ ಮೇಳದಲ್ಲಿ 72 ಮಳಿಗೆಗಳು ಇದ್ದವು. ಒಟ್ಟು ₹1.20 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ, 76 ಮಳಿಗೆಗಳಿದ್ದು, ₹2 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ’ ಎಂದರು.

‘ರಾಜ್ಯದಲ್ಲಿ 253 ಸಂಘ–ಸಂಸ್ಥೆಗಳು ಖಾದಿ ಬಟ್ಟೆ ಉತ್ಪಾದಿಸುತ್ತಿವೆ. ಈ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ, ಆಯೋಗವು ಸಬ್ಸಿಡಿ ಸೇರಿದಂತೆ, ವಿವಿಧ ರೀತಿಯ ನೆರವು ನೀಡುತ್ತಿದೆ. ಸಾಂಪ್ರದಾಯಿಕ ಚರಕ ಮತ್ತು ಮಗ್ಗಗಳ ಬದಲಾವಣೆಗೂ ನೆರವು ನೀಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ (ಪಿಎಂಇಜಿಪಿ) ರಾಜ್ಯದಲ್ಲಿ 25,750 ಯೂನಿಟ್‌ಗಳನ್ನು ಆರಂಭಗೊಂಡಿದ್ದು, 2.30 ಲಕ್ಷ ಉದ್ಯೋಗ ಸೃಷ್ಟಿಸಿಯಾಗಿವೆ’ ಎಂದು ಹೇಳಿದರು.

ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಗರಗ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷ ಬಸವಪ್ರಭು ಹೊಸಕೇರಿ, ‘ಖಾದಿ ಮತ್ತು ಗ್ರಾಮೋದ್ಯೋಗವು ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡಬಲ್ಲದು. ಜನರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆಯನ್ನು ವಿಸ್ತರಿಸಿದಾಗ, ಖಾದಿ ಬಳಕೆ ಹೆಚ್ಚಲಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ, ನಾರಾಯಣಕರ, ಬಲಗುಂದಿ, ಎನ್‌.ಎಂ. ತಿರ್ಲಾಪುರ, ಪಾಲಿಕೆಯ ಮಾಜಿ ಸದಸ್ಯರಾದ ಮೋಹನ ಹಿರೇಮನಿ, ಬೀರಪ್ಪ ಖಂಡೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.