ADVERTISEMENT

ಹುಬ್ಬಳ್ಳಿ: ಎಲ್‌ಇಡಿ ದೀಪ ಅಳವಡಿಕೆ ಯೋಜನೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:02 IST
Last Updated 31 ಜುಲೈ 2025, 4:02 IST
   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಬೀದಿ ವಿದ್ಯುತ್‌ ಕಂಬಗಳಲ್ಲಿ ಎಲ್‌ಇಡಿ (ಲೈಟ್‌ ಎಮಿಟಿಂಗ್‌ ಡಿಯೊಡ್‌) ದೀಪ ಅಳವಡಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. 

₹93 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನವಾಗಲಿದೆ. ಎರಡು ಕಂಪನಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ತುಮಕೂರು ಹಾಗೂ ಶಿವಮೊಗ್ಗದಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸಿ ಯಶಸ್ಸು ಕಂಡಿರುವ ತುಮಕೂರಿನ ಮಂಜುನಾಥ ಎಲೆಕ್ಟ್ರಿಕಲ್ ಕಂಪನಿಗೆ ಟೆಂಡರ್ ಅಂತಿಮಗೊಂಡಿದೆ.

ಯೋಜನೆ ಅಡಿ 75 ಸಾವಿರಕ್ಕೂ ಹೆಚ್ಚು ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಸದ್ಯ ಮಹಾನಗರ ಪಾಲಿಕೆಯು ಪ್ರತಿ ತಿಂಗಳೂ ₹2 ಕೋಟಿ ವಿದ್ಯುತ್ ಶುಲ್ಕ ಭರಿಸುತ್ತಿದ್ದು, ಈ ಯೋಜನೆ ಅನುಷ್ಠಾನವಾದರೆ ಶೇ 50ರಷ್ಟು ಹಣ ಉಳಿತಾಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.  

ADVERTISEMENT

‘ಸರ್ಕಾರದಿಂದ ಆದೇಶ ಪ್ರತಿ ಬಂದ ನಂತರ ಟೆಂಡರ್ ಪಡೆದ ಕಂಪನಿ ಜತೆ ಪಾಲಿಕೆ ಒಪ್ಪಂದ ಮಾಡಿಕೊಳ್ಳಲಿದೆ. ಆ ನಂತರ ಎಲ್‌ಇಡಿ ದೀಪ ಅಳವಡಿಕೆ ಕಾರ್ಯ ಆರಂಭವಾಗಲಿದೆ’ ಎಂದು ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಂ.ಗಣಾಚಾರಿ ತಿಳಿಸಿದರು. 

‘ಎಲ್‌ಇಡಿ ದೀಪ ಅಳವಡಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ದೀಪಾವಳಿ ವೇಳೆಗೆ ಅವಳಿ ನಗರದಲ್ಲಿ ಎಲ್‌ಇಡಿ ದೀಪಗಳು ಬೆಳಗಲಿವೆ’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.