ADVERTISEMENT

‘ಎಲ್‌ಇಡಿ’ ದೀಪ ಅಳವಡಿಕೆ ಯೋಜನೆ ನನೆಗುದಿಗೆ

ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯ ಆರೋಪ; ಪಾಲಿಕೆಯಿಂದ ಪರ್ಯಾಯ ಯೋಜನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:52 IST
Last Updated 6 ನವೆಂಬರ್ 2025, 4:52 IST
ಜ್ಯೋತಿ ಪಾಟೀಲ 
ಜ್ಯೋತಿ ಪಾಟೀಲ    

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದ ₹93 ಕೋಟಿ ವೆಚ್ಚದ ಎಲ್‌ಇಡಿ ಬೀದಿ ದೀಪ ಅಳವಡಿಕೆ ಯೋಜನೆ, ಕಾರ್ಯಾದೇಶ ಹಂತದಲ್ಲಿಯೇ ನನೆಗುದಿಗೆ ಬಿದ್ದಿದೆ. ಗುತ್ತಿಗೆ ಪಡೆದ ಕಂಪನಿ ಬ್ಯಾಂಕ್‌ ಗ್ಯಾರಂಟಿ ನೀಡಲು ವಿಳಂಬ ಮತ್ತು ನಿರ್ಲಕ್ಷ್ಯ ವಹಿಸಿದ್ದರಿಂದ, ಟೆಂಡರ ಅನ್ನೇ ರದ್ದು ಪಡಿಸಿ ಪರ್ಯಾಯ ಮಾರ್ಗದತ್ತ ಪಾಲಿಕೆ ಚಿಂತನೆ ನಡೆಸಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ)‌ ಅನುಷ್ಠಾನವಾಗಬೇಕಿದ್ದ ಈ ಯೋಜನೆಯ ಟೆಂಡರ್ ಅನ್ನು ತುಮಕೂರಿನ ಮಂಜುನಾಥ ಎಲೆಕ್ಟ್ರಿಕಲ್ ಕಂಪನಿ ಪಡೆದುಕೊಂಡಿತ್ತು. ಕಳೆದ ಆಗಸ್ಟ್‌ನಲ್ಲಿಯೇ ಸರ್ಕಾರದಿಂದ ಒಪ್ಪಿಗೆಯೂ ದೊರೆತು, ಒಪ್ಪಂದ ಪ್ರಕಾರ ಕಂಪನಿಯು 77 ಸಾವಿರ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು, 94 ತಿಂಗಳ ಬ್ಯಾಂಕ್‌ ಗ್ಯಾರಂಟಿ (₹4.40 ಕೋಟಿ) ನೀಡಬೇಕಿತ್ತು. ತಿಂಗಳಿಂದೀಚೆಗೆ ಕಂಪನಿ ಪಾಲಿಕೆ ಜತೆ ಸರಿಯಾಗಿ ವ್ಯವಹರಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ, ಯೋಜನೆಯನ್ನೇ ಕೈಬಿಡಲು ನಿರ್ಧರಿಸಲಾಗಿದೆ.

‘ಗುತ್ತಿಗೆ ಪಡೆದ ಕಂಪನಿ ನಿಯಮಾನುಸಾರ ಬ್ಯಾಂಕ್‌ ಗ್ಯಾರಂಟಿ ನೀಡಿದರೆ ಮಾತ್ರ, ಕಾರ್ಯಾದೇಶ ನೀಡಲು ಸಾಧ್ಯ. 24 ತಿಂಗಳ ಬ್ಯಾಂಕ್‌ ಗ್ಯಾರಂಟಿಯಷ್ಟೇ ನೀಡಿದೆ. ಅಲ್ಲದೆ, ದೂರವಾಣಿ ಮೂಲಕ ಅವರನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಯತ್ನಿಸಿದರೂ, ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಪಾಲಿಕೆ ಸದಸ್ಯರ ಒಪ್ಪಿಗೆ ಮೇರೆಗೆ ಪರ್ಯಾಯ ಚಿಂತನೆ ನಡೆಸಲಾಗಿದೆ’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

ADVERTISEMENT

‘ಪಾಲಿಕೆಯಿಂದಲೇ ಎಲ್‌ಇಡಿ ದೀಪ ಖರೀದಿಸಬೇಕೆಂದರೆ ₹25 ಕೋಟಿ ಬೇಕಾಗುತ್ತದೆ. ಈ ಎಲ್ಲ ವಿಷಯಗಳನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಪರ್ಯಾಯ ಚಿಂತನೆ ನಡೆಸಲಾಗಿದೆ. ಬೀದಿ ದೀಪ ದುರಸ್ತಿ, ಅಳವಡಿಕೆ, ಖರ್ಚು ವೆಚ್ಚಗಳ ಕುರಿತು ಚರ್ಚಿಸಲಾಗಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ಮೇಯರ್‌ ಜ್ಯೋತಿ ಪಾಟೀಲ ಮಾತನಾಡಿ, ‘ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವ್ದಾರಿಯಿಂದಾಗಿ ಯೋಜನೆ ಅನುಷ್ಠಾನ ವಿಳಂಬವಾಗಿದ್ದೂ ಅಲ್ಲದೆ, ಕೈ ಬಿಡುವ ಹಂತಕ್ಕೂ ಬಂದಿದ್ದೇವೆ. ಕಾರ್ಯಾದೇಶ ನೀಡುವ ಪೂರ್ವವೇ ಅವರ ವರ್ತನೆ ಹೀಗಿದೆ ಎಂದಾಗ, ಸೂಕ್ತ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ. ಈಗಾಗಲೇ ಸಾಕಷ್ಟು ಬಾರಿ ಸಮಯ ನೀಡಿದ್ದು, ಮತ್ತೆ ವಿಸ್ತರಿಸಲು ಸಾಧ್ಯವಿಲ್ಲ. ಅವರ ಮೇಲೆ ನಮಗೆ ಯಾವ ವಿಶ್ವಾಸವೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೀದಿ ದೀಪ ಅಳವಡಿಕೆಗೆ ಪರ್ಯಾಯ ಯೋಜನೆ ರೂಪಿಸಲಾಗಿದ್ದು, ಹದಿನೈದು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಳಾದ ಬೀದಿ ದೀಪ ದುರಸ್ತಿಗೆ ಹಾಗೂ ಬದಲಿಸಲು ಹೆಚ್ಚುವರಿ ಅನುದಾನ ನೀಡುವುದು ಒಂದು ಯೋಜನೆಯಾದರೆ, ವಲಯಕ್ಕೆ ತಲಾ ₹2 ಕೋಟಿ ಹಂಚಿಕೆ ಮಾಡಿ, ಪಾಲಿಕೆಯೇ ಟೆಂಡರ್‌ ಕರೆಯುವುದು ಮತ್ತೊಂದು ಯೋಜನೆಯಾಗಿದೆ. ಇಲ್ಲವೇ, ಪ್ರತಿ ವಾರ್ಡ್‌ಗೆ ₹2 ಲಕ್ಷ ನೀಡಿ ಬೀದಿ ದೀಪ ಅಳವಡಿಸುವ ಬಗ್ಗೆಯೂ ಚರ್ಚಿಸಲಾಗಿದೆ’ ಎಂದು ವಿವರಿಸಿದರು.

ರುದ್ರೇಶ ಘಾಳಿ 

Quote - ಗುತ್ತಿಗೆ ಪಡೆದ ಕಂಪನಿ ಬಗ್ಗೆ ಕೆಲವು ಕಡೆ ಆರೋಪಗಳಿದ್ದು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ ಜ್ಯೋತಿ ಪಾಟೀಲ ಮೇಯರ್‌

Quote - ಪಾಲಿಕೆ ವ್ಯಾಪ್ತಿಯಲ್ಲಿ ಬೇಕಾಗುವ ಬೀದಿ ದೀಪಗಳ ಹಾಗೂ ಕಂಬಗಳ ಸಂಖ್ಯೆ ಎಷ್ಟು ಎನ್ನುವ ಮಾಹಿತಿ ಲಭ್ಯವಿದೆ. ಅದಕ್ಕನುಗುಣವಾಗಿ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು ರುದ್ರೇಶ ಘಾಳಿ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.