ADVERTISEMENT

ದೇಶ ಹಿಂದುತ್ವದ ಪರವಾಗಿರಲಿ

ಬಂಟರ ಸಂಘದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಸಚಿವ ಮುನೇನಕೊಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 16:22 IST
Last Updated 20 ಮಾರ್ಚ್ 2022, 16:22 IST
ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ– ಧಾರವಾಡ ಬಂಟರ ಸಂಘವು ಭಾನುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್‌. ಸುಭಾಶ್ಚಂದ್ರ ಶೆಟ್ಟಿ, ‌ಉಪಾಧ್ಯಕ್ಷರಾದ ಕೆ. ಸುಧಾಕರ ಶೆಟ್ಟಿ, ಡಾ.ಡಿ.ಜಿ ಶೆಟ್ಟಿ ಇದ್ದಾರೆ
ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ– ಧಾರವಾಡ ಬಂಟರ ಸಂಘವು ಭಾನುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್‌. ಸುಭಾಶ್ಚಂದ್ರ ಶೆಟ್ಟಿ, ‌ಉಪಾಧ್ಯಕ್ಷರಾದ ಕೆ. ಸುಧಾಕರ ಶೆಟ್ಟಿ, ಡಾ.ಡಿ.ಜಿ ಶೆಟ್ಟಿ ಇದ್ದಾರೆ   

ಹುಬ್ಬಳ್ಳಿ: ‘ಹಿಂದುತ್ವದ ಪರವಾಗಿ ದೇಶ ಇರಬೇಕು ಎನ್ನುವ ಆಶಯವಿದೆ. ಇದಕ್ಕೆ ಬಂಟರ ಸಮುದಾಯದ ಕೊಡುಗೆ ಅಪಾರವಾಗಿದ್ದು, ಸಮುದಾಯವು ಹಿಂದುತ್ವದ ಪರ ಧ್ವನಿಗೂಡಿಸಿಕೊಂಡು ಬಂದಿದೆ’ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹುಬ್ಬಳ್ಳಿ– ಧಾರವಾಡ ಬಂಟರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಂಟರು ಶ್ರಮ ಜೀವಿಗಳು. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಯಾವುದೇ ಒಂದು ಭಾಗಕ್ಕೆ ಸೀಮಿತವಾಗದೆ ರಾಜ್ಯದ ಎಲ್ಲ ಭಾಗದ ಜನರೊಂದಿಗೆಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಉದ್ಯೋಗ ಸೃಷ್ಟಿಯಲ್ಲಿ ಬಂಟರ ಕೊಡುಗೆ ಅಪಾರ. ಈ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಜೊತೆಗೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ನಾವು ಹಲವರನ್ನು ಕಳೆದುಕೊಂಡಿದ್ದೇವೆ. ಅವರನ್ನು ಮರಳಿ ಕರೆತರಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡಿದೆ. ಲಸಿಕೆ ಸಕಾಲದಲ್ಲಿ ಸಿಗದಿದ್ದಿದ್ದರೆ ನಾವು ಸಹಜ ಜೀವನ ನಡೆಸುವುದು ಸವಾಲಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ಬಂಟರ ಸಂಘದ ಅಧ್ಯಕ್ಷ ಎಸ್‌. ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ‘ಕೋವಿಡ್ ಭೀತಿಯಿಂದಾಗಿ ಎರಡು ವರ್ಷಗಳಿಂದ ಸ್ನೇಹಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಸಂಘದಿಂದ ಸಮುದಾಯ ಪರವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಸಂಘವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆರವಿನ ಹಸ್ತಚಾಚಿದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದವರೊಂದಿಗೆ ಮಿತ್ರರಂತೆ ನಾವು ಬದುಕು ಸಾಗಿಸುತ್ತಿದ್ದೇವೆ. ಈ ಭಾಗದಲ್ಲೂ ಸಂಘಟನೆಗೆ ಉತ್ತಮ ಹೆಸರು ಇದೆ. ಇದೇ ಮಾದರಿಯಲ್ಲಿ ನಮ್ಮ ಮುಂದಿನ ಪೀಳಿಗೆಯೂ ಸಾಗಬೇಕು’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಕ್ರೀಡಾ ವಿಜೇತರಿಗೆ ಬಹುಮಾನ ಹಾಗೂ ಬಂಟಧ್ವನಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯದರ್ಶಿ ವಿಶ್ವನಾಥ ಆರ್‌. ಶೆಟ್ಟಿ, ಖಜಾಂಚಿ ಹರ್ಷಕುಮಾರ ಶೆಟ್ಟಿ, ಸಹ ಕಾರ್ಯದರ್ಶಿ ಕೆ. ವಿರೇಂದ್ರ ಶೆಟ್ಟಿ, ‌ಎಟಿಎಸ್‌ ಗ್ರೂಫ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಮೂಡಂಬೈಲ್‌ ರವಿ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕೆ.ಶಂಕರ ಶೆಟ್ಟಿ, ದೀಪಕ್‌ ಶೆಟ್ಟಿ, ರವಿಕಾಂತ ಶೆಟ್ಟಿ, ರತ್ನಾಕರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.