ADVERTISEMENT

ವಂಚಿತರಾಗದಿರೋಣ ಪಂಚೇಂದ್ರಿಯ ಪ್ರಜಾಪ್ರಭುತ್ವದಿಂದ: ಪ್ರೊ.ಬರಗೂರು ರಾಮಚಂದ್ರಪ್ಪ

‘ಸಮಕಾಲೀನ ಭಾರತದಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಪ್ರಸ್ತುತತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 13:50 IST
Last Updated 14 ಏಪ್ರಿಲ್ 2019, 13:50 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣಗಳ ಸಂಪುಟಗಳ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಎನ್‌.ಎಂ. ಸಾಲಿ, ಪ್ರೊ. ಪ್ರಮೋದ ಗಾಯಿ, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಅವಥಿ ರಾಮಯ್ಯ, ಪ್ರೊ. ಸಿ.ಬಿ.ಹೊನ್ನುಸಿದ್ಧಾರ್ಥ, ಎನ್. ಮುನಿರಾಜು, ಡಾ. ಸುಭಾಸಚಂದ್ರ ನಾಟೀಕಾರ ಮತ್ತು ಪ್ರೊ. ಶಿವರುದ್ರ ಕೆ. ಕಲ್ಲೋಳಿಕರ ಇದ್ದಾರೆ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣಗಳ ಸಂಪುಟಗಳ ಬಿಡುಗಡೆ ಸಂದರ್ಭದಲ್ಲಿ ಪ್ರೊ. ಎನ್‌.ಎಂ. ಸಾಲಿ, ಪ್ರೊ. ಪ್ರಮೋದ ಗಾಯಿ, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಅವಥಿ ರಾಮಯ್ಯ, ಪ್ರೊ. ಸಿ.ಬಿ.ಹೊನ್ನುಸಿದ್ಧಾರ್ಥ, ಎನ್. ಮುನಿರಾಜು, ಡಾ. ಸುಭಾಸಚಂದ್ರ ನಾಟೀಕಾರ ಮತ್ತು ಪ್ರೊ. ಶಿವರುದ್ರ ಕೆ. ಕಲ್ಲೋಳಿಕರ ಇದ್ದಾರೆ   

ಧಾರವಾಡ: ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕೆಂದರೆ ನಾವು ನಮ್ಮ ಪಂಚೇಂದ್ರಿಯ ಪ್ರಜಾಪ್ರಭುತ್ವದಿಂದ ವಂಚಿತರಾಗಬಾರದು’ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಡಾ. ಬಿ.ಆರ್. ಅಂಬೇಡ್ಕರ್ ಅವರು 128ನೇ ಜಯಂತಿ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್‌ ಅಧ್ಯಯನ ವಿಭಾಗ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ‘ಸಮಕಾಲೀನ ಭಾರತದಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಪ್ರಸ್ತುತತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

‘ಆಳುವ ಜನ ಕೃತಕ ಪಂಚೇಂದ್ರಿಯಗಳನ್ನು ನೀಡುತ್ತಿರುವುದರಿಂದ ಸಂವೇದನಾಶೀಲತೆಯನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಬುದ್ಧನ ಕಿವಿಯಾಗಿ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕಿದ್ದ ಸಂದರ್ಭದಲ್ಲಿ ನಾಲಿಗೆ ಉದ್ದವಾಗುತ್ತಿದ್ದು, ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ಇಂಥ ಕಾಲಘಟ್ಟದಲ್ಲಿ ಅಂಬೇಡ್ಕರ್ ಹೇಳಿರುವ ಸಾಮಾಜಿ, ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವ ಬಹಳಾ ಮುಖ್ಯವಾಗಿದೆ’ ಎಂದರು.

ADVERTISEMENT

‘ಹಸಿವಿನ ರಾಜಕಾರಣ ಮಾಡಬೇಕಾದ ಈ ದೇಶದಲ್ಲಿ ಹಸುವಿನ ರಾಜಕಾರಣ ನಡೆಯುತ್ತಿರುವುದು ವಿಪರ್ಯಾಸ. ಜಾತಿವಾದ ಕೊನೆಗೊಂಡಿಲ್ಲ. ಇಂದಿಗೂ ದೇಶದಲ್ಲಿ ಕೈಯಲ್ಲಿ ಮಲ ಬಾಚುತ್ತಿರುವವ ಸಂಖ್ಯೆ ಒಂದು ಕೋಟಿಗೂ ಅಧಿಕ. ಪ್ರತಿ ಐದು ದಿನಕ್ಕೆ ಒಬ್ಬ ಪೌರ ಕಾರ್ಮಿಕ ಮೃತಪಡುತ್ತಿದ್ದಾರೆ. ಇವರ ಸಂಕಟವನ್ನು ಅನುಭವಿಸಲು ಸಾಧ್ಯವಾಗಬೇಕು. ಕಟ್ಟ ಕಡೆಯ ಮನುಷ್ಯನೆಡೆ ಮೊಟ್ಟ ಮೊದಲು ಯೋಚನೆ ಮಾಡುವುದನ್ನು ಕಲಿತು, ಇತರರಿಗೂ ಕಲಿಸಿದರೆ ಅದೇ ದೇಶಪ್ರೇಮ’ ಎಂದರು.

‘ದೇಶದ್ರೋಹ ಮತ್ತು ದೇಶಪ್ರೇಮ ಕುರಿತು ಇಂದು ಸಾಕಷ್ಟು ಚರ್ಚೆಯಾಗುತ್ತಿದೆ. ಜನಪ್ರೇಮಿಗಳಾದಾಗ ಮಾತ್ರ ನಾವು ದೇಶಪ್ರೇಮಿಗಳಾಗುತ್ತೇವೆ. ದೇಶವೆಂದರೆ ಭೂಗೋಳ ಮಾತ್ರವಲ್ಲ. ಪರಕೀಯ ಪ್ರಜ್ಞೆ ಅನುಭವಿಸುತ್ತಿರುವ ಅಸಂಖ್ಯಾತ ಜನರನ್ನು ಈ ನಾಡಿನವರು ಎಂದು ಭಾವಿಸದಿದ್ದರೆ ನಾವು ದೇಶಪ್ರೇಮಿಗಳಾಗಿರಲು ಸಾಧ್ಯವಿಲ್ಲ. ಜಾತಿ, ವರ್ಣ ಮೀರಿ ಪ್ರತಿಯೊಬ್ಬರೂ ನಮ್ಮವರು ಎಂದು ಒಪ್ಪಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ. ಇದೇ ದೇಶಪ್ರೇಮದ ಮೊದಲ ಪಾಠ ಎಂಬುದನ್ನು ಪ್ರತಿಯೊಬ್ಬರೂ ಭಾವಿಸಬೇಕು’ ಎಂದು ಪ್ರೊ. ಬರಗೂರು ಹೇಳಿದರು.

‘ಹೋರಾಟದ ಹಿನ್ನೆಲೆಯ 20ನೇ ಶತಮಾನದಿಂದ ಅಸಹಾಯಕತೆಯ 21ನೇ ಶತಮಾವನ್ನು ಸಂಭ್ರಮಿಸುತ್ತಿದ್ದೇವೆ. ಸಂವಿಧಾನ ಸುಟ್ಟು ಜಾತ್ಯಾತೀತತೆ, ಸಹಿಷ್ಣುತೆ, ಸಮಾನತೆ ಸುಡುವ ಮೂಲಕ ಮಾನವೀಯ ಅಂತಃಕರಣದ ಮೇಲೆ ಹಲ್ಲ ನಡೆಸಲಾಗುತ್ತಿದೆ. ಮತ್ತೊಂದೆಡೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಗುಂಡಿಕ್ಕುವ ಅಣಕು ಪ್ರದರ್ಶನ ನಡೆಸಿ ವಿಕೃತಿ ಮೆರೆಯಲಾಗುತ್ತಿದೆ. ಇಂಥ ಭಾವೋದ್ರೇಕದ ಬ್ಲಾಕ್‌ಮೇಲ್ ಅಪಾಯಗಳನ್ನು ಗ್ರಹಿಸಬೇಕಿದೆ’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ನ ಪ್ರೊ. ಅವಥಿ ರಾಮಯ್ಯ, ‘ವ್ಯಕ್ತಿಯನ್ನು ಆತನ ಪ್ರದೇಶ, ಜಾತಿ ಹಾಗೂ ಇನ್ನಿತರ ಮೂಲಗಳಿಂದ ವಿಶ್ಲೇಷಿಸುವ ನಮ್ಮೊಳಗಿನ ವೈರಸ್‌ ನಮ್ಮ ತಂತ್ರಾಂಶಕ್ಕೆ ತಗುಲಿದೆ. ಅಂಬೇಡ್ಕರ್ ಹೇಳಿದಂತೆ ದೇಶ ಕಟ್ಟುವಿಕೆ ಮೊದಲಾಗಬೇಕು ಹಾಗೂ ನಾನು ಮೊದಲು ಮತ್ತು ಅಂತಿಮವಾಗಿಯೂ ಭಾರತೀಯನಾಗಿರಬೇಕು ಎಂಬುದು ನಮ್ಮ ಮೂಲಮಂತ್ರವಾಗಬೇಕು’ ಎಂದರು.

ಕುಲಪತಿ ಪ್ರೊ. ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.