ADVERTISEMENT

ಮಾತೃಭಾಷೆಯಲ್ಲಿ ಕಲಿಕೆ ಅತ್ಯುತ್ತಮ: ಕೋರೆ

ಎಂಜೆಇ ಸಂಸ್ಥೆಯ ಲಯನ್ಸ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 4:54 IST
Last Updated 13 ಜನವರಿ 2024, 4:54 IST
<div class="paragraphs"><p>ಹುಬ್ಬಳ್ಳಿಯ ವಿಜಯನಗರದ ಎಂಜೆಇ ಸಂಸ್ಥೆಯ ಲಯನ್ಸ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೆಎಲ್‌ಇ</p></div>

ಹುಬ್ಬಳ್ಳಿಯ ವಿಜಯನಗರದ ಎಂಜೆಇ ಸಂಸ್ಥೆಯ ಲಯನ್ಸ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೆಎಲ್‌ಇ

   

ಹುಬ್ಬಳ್ಳಿ: ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತಾರೆ, ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ವಿಜಯನಗರದ ಎಂಜೆಇ ಸಂಸ್ಥೆಯ ಲಯನ್ಸ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

‘ವಿಶೇಷವಾಗಿ ಪಾಲಕರಿಗೆ  ಇಂಗ್ಲೀಷ್‌ ಮೀಡಿಯಂ ಶಾಲೆಗಳ ಬಗ್ಗೆ ಒಲವು ಇದೆ. ಬಹಳಷ್ಟು ಜನ ಪಾಲಕರಿಗೆ ಇಂಗ್ಲಿಷ್‌ ಬರಲ್ಲ. ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಿಗೆ ಕಳುಹಿಸುತ್ತಾರೆ. ಆ ನಂತರ ಅವರ ಬೆಳವಣಿಗೆಯನ್ನು  ಗಮನಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಹಳಷ್ಟು ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ಹೇಳಿದರು.

‘ಪಾಲಕರು ಹೆಚ್ಚಿನ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಉತ್ಸುಕತೆ ಹೊಂದಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದೆ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಶಿಕ್ಷಕರಿದ್ದಾರೆ. ಅದಕ್ಕಾಗಿಯೇ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ನಮ್ಮಲ್ಲಿರುವ ಐಐಟಿ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮವಾಗಿವೆ. ಇವುಗಳನ್ನು ತಮ್ಮಲ್ಲಿಯೂ ಸ್ಥಾಪಿಸುವಂತೆ ವಿದೇಶಿಗರು ಕೇಳುತ್ತಿದ್ದಾರೆ’ ಎಂದು ನುಡಿದರು.

ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆ, ಬಾಗಲಕೋಟೆಯಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆ, ಹುಬ್ಬಳ್ಳಿಯಲ್ಲಿ ಲಯನ್ಸ್‌ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಲವು ಸಂಸ್ಥೆಗಳು ಸಮಾಜಸೇವೆ ಎಂದುಕೊಂಡು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದವು. ಇದರ ಫಲವಾಗಿ ಇವತ್ತು ಹಲವರು ಐ.ಎ.ಎಸ್‌, ಐ.ಪಿ.ಎಸ್‌, ವೈದ್ಯರು, ಎಂಜಿನಿಯರ್‌ಗಳಾಗಿದ್ದಾರೆ ಎಂದು ಹೇಳಿದರು.

ಲಯನ್ಸ್ ಶಾಲೆಯ ಹಳೆಯ ವಿದ್ಯಾರ್ಥಿ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನ, ಕ್ರಿಕೆಟಿಗ ಅವಿನಾಶ ವೈದ್ಯ, ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡ ಯೋಧ ನವೀನ ಕಾರಿಯಪ್ಪ, ಉದ್ಯಮಿ ಗಿರೀಶ ಮಾನೆ, ಶಾಸಕ ಶ್ರೀನಿವಾಸ ಮಾನೆ, ಆರ್‌.ಎನ್‌.ಜೋಶಿ, ವೈದ್ಯ ಚಂದ್ರಶೇಖರ ಯಾವಗಲ್‌,  ಉದ್ಯಮಿ ಸಚಿನ ಟೆಂಗಿನಕಾಯಿ, ವಿಕ್ರಾಂತ ಪಾಟೀಲ, ನವೀನ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಐಐಟಿ ನಿವೃತ್ತ ಪ್ರಾಧ್ಯಾಪಕ ಎಸ್.ಎಂ. ಶಿವಪ್ರಸಾದ, ಲಯನ್ಸ್ ಜಿಲ್ಲಾ ಗವರ್ನರ್ ಮನೋಜ ಮಾಣಿಕ, ಜಯಮೋಲ ನಾಯಕ, ಎಂಜೆಇ ಸಂಸ್ಥೆಯ ಚೇರ್ಮನ್ ಜಯಪ್ರಕಾಶ ಟೆಂಗಿನಕಾಯಿ, ರವಿ ನಾಡಿಗೀರ, ಎನ್.ಆರ್. ಪಾಟೀಲ, ಶಂಭು ಯಾವಗಲ್ಲ, ಉದಯ ಬಾಡಕರ, ಪ್ರಾಂಶುಪಾಲೆ ನೇಹಾ ಗಾಡಗೋಲಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.