ADVERTISEMENT

9 ದಿನದಲ್ಲೇ ಮತದಾನದ ಹಕ್ಕು ಕಳೆದುಕೊಂಡ ಮಳಲಿ ಗ್ರಾಮ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 2:06 IST
Last Updated 8 ಡಿಸೆಂಬರ್ 2021, 2:06 IST
ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯ್ತಿಯ ನೋಟ
ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯ್ತಿಯ ನೋಟ   

ಮಳಲಿ (ಗುಡಗೇರಿ): ತ್ರಿವಳಿ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತಬೇಟೆ ಜೋರಾಗಿ ನಡೆದಿದ್ದರೆ, 9 ದಿನಗಳ ಹಿಂದೆ ಅಧಿಕಾರ ಅವಧಿ ಪೂರ್ಣಗೊಳಿಸಿದ ಮಳಲಿ ಗ್ರಾಮ ಪಂಚಾಯ್ತಿಯ ಸದಸ್ಯರು ಮಾತ್ರ ತೀವ್ರ ನಿರಾಶರಾಗಿದ್ದಾರೆ.

ಈ ಬಾರಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು ಇಲ್ಲದೆ ಇರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಅವರ ಮನವೊಲಿಸಲು ದುಂಬಾಲು ಬಿದ್ದಿದ್ದಾರೆ. ಆದರೆ, ಪರಿಷತ್ ಚುನಾವಣೆಗೆ ತಾಲ್ಲೂಕಿನ 27 ಸದಸ್ಯರ ಮತದಾನದ ಹಕ್ಕು ಕಳೆದುಕೊಂಡಿದ್ದರೇ, ಅವರಲ್ಲಿ ಕೇವಲ 9 ದಿನಗಳಲ್ಲಿ ಮಳಲಿ ಗ್ರಾಮ ಪಂಚಾಯಿತಿಯ ತಮ್ಮ ಮತಚಲಾವಣೆಯ ಹಕ್ಕನ್ನು ಕಳೆದುಕೊಂಡಿದ್ದು ಗಮನಾರ್ಹ ಸಂಗತಿ.

ಅಗಸ್ಟ್ ತಿಂಗಳಲ್ಲಿ ಪಶುಪತಿಹಾಳ ಗ್ರಾ.ಪಂ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಅಲ್ಲಿನ 9 ಸದಸ್ಯರು, ಗೌಡಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಂಕ್ಲೀಪುರದ ಒಬ್ಬರು, ಯಲಿವಾಳ ಗ್ರಾಮ ಪಂಚಾಯ್ತಿಯ ಒಬ್ಬರು ಸದಸ್ಯರು ಮರಣ ಹೊಂದಿದ್ದರಿಂದ ಈ ಸ್ಥಾನಗಳು ತೆರವಾಗಿವೆ. ಚಾಕಲಬ್ಬಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದ್ವಾಡ ಗ್ರಾಮವು 6 ಸದಸ್ಯ ಸ್ಥಾನಗಳನ್ನು ಹೊಂದಿದ್ದು ಅಲ್ಲಿನ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಅಲ್ಲಿ ಈವರೆಗೆ ಚುನಾವಣೆ ನಡೆದಿಲ್ಲ.

ADVERTISEMENT

‘ಡಿ.1ರಂದು ಮಳಲಿ ಗ್ರಾಮ ಪಂಚಾಯ್ತಿಯ 11 ಸದಸ್ಯರ ಸದಸ್ಯತ್ವ ಅವಧಿ ಪೂರ್ಣಗೊಂಡಿದ್ದರಿಂದ ಮತದಾನದ ಅವಕಾಶ ದೊರೆತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಇಒ ಡಾ.ಮಹೇಶ ಕುರಿಯವರ ಹೇಳಿದರು.

‘ಪರಿಷತ್ ಚುನಾವಣೆ ಘೋಷಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇತ್ತು. ಮತದಾನದ ಹಕ್ಕು ನೀಡಬೇಕು‘ ಎನ್ನುತ್ತಾರೆ ಮಳಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಡಿ.ಬಡಿಗೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.