ADVERTISEMENT

ಹುಬ್ಬಳ್ಳಿ: ಬಾಲ ಕಲ್ಯಾಣ ಕೇಂದ್ರ ಮಕ್ಕಳ ಸಾಮೂಹಿಕ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 6:04 IST
Last Updated 27 ಜನವರಿ 2023, 6:04 IST
ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಸೇವಾ ಸದನದ ಆವರಣದಲ್ಲಿ ಗುರುವಾರ ಬಾಲಕಲ್ಯಾಣ ಕೇಂದ್ರ ಮಕ್ಕಳ ಸಾಮೂಹಿಕ ಜನ್ಮದಿನ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳಿಗೆ ಆರತಿ ಬೆಳಗಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಸೇವಾ ಸದನದ ಆವರಣದಲ್ಲಿ ಗುರುವಾರ ಬಾಲಕಲ್ಯಾಣ ಕೇಂದ್ರ ಮಕ್ಕಳ ಸಾಮೂಹಿಕ ಜನ್ಮದಿನ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳಿಗೆ ಆರತಿ ಬೆಳಗಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸಂಜೆ ಆಗಷ್ಟೇ ಕಳೆದು, ಕತ್ತಲು ಆವರಿಸಿತ್ತು. ಒಂದೆಡೆ ಝಗಮಗಿಸುವ ವಿದ್ಯುದೀಪಗಳ ಬೆಳಕಿನ ಚಿತ್ತಾರ. ಮತ್ತೊಂದೆಡೆ ಅಲಂಕಾರಗೊಂಡ ಬಾಲಕಿಯರ ಕಲರವ...

ಪುಟಾಣಿ ಬಾಲಕಿ ನಿರ್ಭೀತವಾಗಿ ವೇದಿಕೆ ಏರಿ ನಿರರ್ಗಳವಾಗಿ ‘ಕಗ್ಗ’ದ ಸಾಲು ಉಲಿದು ಅರ್ಥ ಹೇಳಿ ನೆರೆದಿದ್ದವರನ್ನು ಚಕಿತಗೊಳಿಸಿದರೆ, ಮೊತ್ತೊಬ್ಬ ಬಾಲಕಿ ಭಗವದ್ಗೀತೆ ಶ್ಲೋಕ ಹೇಳಿ ಅರ್ಥ ತಿಳಿಸಿದಳು. ಮೂವರು ಬಾಲಕಿಯರು ಭಗವದ್ಗೀತೆ ಶ್ಲೋಕಗಳನ್ನು ಹಾಡಿದರು.

ಮೂವರು ಬಾಲಕಿಯರು ‘ತಾಯ್ತನ’, ‘ಮಾತೃವಾತ್ಸಲ್ಯ’ ನಿರೂಪಿಸುವ ರೂಪಕ ಪ್ರದರ್ಶಿಸಿ ಚಪ್ಪಾಳೆಗಿಟ್ಟಿಸಿದರು. ಮತ್ತೊಂದಿಷ್ಟು ಮಕ್ಕಳ ಐದಾರು ದೇಶಭಕ್ತಿ ಗೀತೆಗಳಿಗೆ ಹೆಜ್ಜೆಹಾಕಿ ಗಮನ ಸೆಳೆದರು.

ADVERTISEMENT

ಇಂಥ ಕ್ಷಣಗಳು ಕಂಡು ಬಂದಿದ್ದು ನಗರದ ಕೇಶ್ವಾಪುರದಲ್ಲಿರುವ ಸೇವಾ ಸದನದ ಆವರಣದಲ್ಲಿ. ಬಾಲಕಲ್ಯಾಣ ಕೇಂದ್ರ ಮಕ್ಕಳ ಸಾಮೂಹಿಕ ಜನ್ಮದಿನ ಕಾರ್ಯಕ್ರಮವದು.

ಮಕ್ಕಳಿಗೆ ಗಣ್ಯ ಮಹಿಳೆಯರು ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ತುಳಸಿಮಾಲಾ ಮಾತನಾಡಿ, ‘ನೈತಿಕ ಮೌಲ್ಯ, ಮಾನವೀಯ ಮೌಲ್ಯ, ಸಾಂಸ್ಥಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿ ಅವರನ್ನು ಉತ್ತಮ ಪಾರಿವಾರಿಕ ಜೀವನಕ್ಕೆ ಅಣಿಗೊಳಿಸುವುದು ದೊಡ್ಡ ಕಾರ್ಯ. ಅನಾಥ ಮಕ್ಕಳಿಗೆ ಸಂಸ್ಕಾರ ನೀಡಿ, ಅವರನ್ನು ಮುಂದಿನ ಭವಿಷ್ಯಕ್ಕೆ ಸತ್ಪ್ರಜೆಗಳನ್ನಾಗಿ ಸೇವಾ ಭಾರತಿ ಬೆಳೆಸುತ್ತಿದೆ. ಇದು ಒಂದು ಸರ್ಕಾರ, ವಿಶ್ವವಿದ್ಯಾಲಯ ಮಾಡುವ ಕೆಲಸವನ್ನೂ ಮೀರಿದ ಕಾರ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ಮೌಲ್ಯಗಳು ಕ್ಷೀಣಿಸುತ್ತಿವೆ. ಶಿಕ್ಷಣ, ಆರ್ಥಿಕ ಉನ್ನತಿ, ಸಮೃದ್ಧಿಯ ಜೊತೆಗೆ ಸಂಸ್ಕಾರವೂ ಹೆಚ್ಚಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಸೇವಾ ಭಾರತಿ ಟ್ರಸ್ಟ್‌ನ ಕಾರ್ಯದರ್ಶಿ ರಘು ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ವೈದ್ಯನಾಥನ್ ಅಯ್ಯರ್ ಮಾತನಾಡಿದರು.

ಮಾತೃಛಾಯಾ ಬಾಲಕಲ್ಯಾಣ ಕೇಂದ್ರ ಪ್ರಕಲ್ಪ ಸಮಿತಿ ಅಧ್ಯಕ್ಷೆ ಶಿಲ್ಪಾ ಜಗದೀಶ ಶೆಟ್ಟರ್ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಭಾರತಿ ನಂದಕುಮಾರ 2022–23ರ ವರದಿ ವಾಚಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ರಂಗಕರ್ಮಿ ಯಶವಂತ ಸರದೇಶಪಾಂಡೆ ನೇತೃತ್ವದಲ್ಲಿ ಗುರು ಇನ್‌ಸ್ಟಿಟ್ಯೂಟ್‌ ಕಲಾವಿದರಿಂದ ‘ಆಲ್‌ ದಿ ಬೆಸ್ಟ್‌’ ನಗೆ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.