ನವಲಗುಂದ: ‘ಸಾಮೂಹಿಕ ವಿವಾಹಗಳು ಬಡವರ ಮದುವೆ ಅಲ್ಲ, ಭಾಗ್ಯವಂತರ ಮದುವೆ. ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಾಗಿದ್ದು, ದುಂದುವೆಚ್ಚ, ಆಡಂಬರಕ್ಕೆ ಕಡಿವಾಣ ಹಾಕಲು ಸಾಧ್ಯ’ ಎಂದು ಶಲವಡಿ ವಿರಕ್ತಮಠದ ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು.
ಶುಕ್ರವಾರ ನಡೆದ ಶಲವಡಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಜಾತ್ರಾಮಹೋತ್ಸವ, ಮುಗಳಖೋಡ ಸದ್ಗುರು ಯಲ್ಲಾಲಿಂಗೇಶ್ವರ ದ್ವಿತೀಯ ವರ್ಷದ ಪುರಾಣ ಪ್ರಾರಂಭೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
‘ಸಹಸ್ರಾರು ಭಕ್ತರ, ಮಠಾಧೀಶರ ಆಶೀರ್ವಾದದೊಂದಿಗೆ ವಿವಾಹ ಬಂಧನಕ್ಕೆ ಒಳಗಾಗುವುದು ಭಾಗ್ಯ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ’ ಎಂದರು.
‘ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.
‘ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಸಾಮಾಜಿಕ ಕಳಕಳಿಯೊಂದಿಗೆ ನಡೆಸುವ ಸಾಮೂಹಿಕ ವಿವಾಹ ನಿಜಕ್ಕೂ ಶ್ಲಾಘನೀಯ’ ಎಂದು ಹಿರೇಕುಂಬಿ ಅಮೋಘೀಮಠದ ಗುರುಸ್ವಾಮೀಜಿ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೆಹಬೂಬಿ ಬಾರಿಗಿಡದ, ಉಪಾಧ್ಯಕ್ಷೆ ರೇಣುಕಾ ಉಡಚಣ್ಣವರ, ಬಿಜೆಪಿ ಮುಖಂಡ ಸಿದ್ದನಗೌಡ ಪಾಟೀಲ, ನವಲಗುಂದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗುರುಪ್ರಸಾದಗೌಡ ಪಾಟೀಲ್, ವಿ.ಸಿ. ಪಾಟೀಲ್, ಡಿ.ಎಫ್. ರೋಣದ, ಉಮೇಶ ಗುರುಶಾಂತಯ್ಯ ನಮಸ್ತೆಮಠ, ಪುರಾಣ ಪ್ರವಚನಕಾರ ವೀರಯ್ಯ ಶಾಸ್ತ್ರಿ ಚರಂತಿಮಠ, ಮುತ್ತುರಾಜ ಹೆಬಸೂರ, ಈಶ್ವರಪ್ಪ ಸಿದ್ದಾಪೂರ, ಅಕ್ಬರಸಾಹೇಬ ನದಾಫ ಇದ್ದರು.
ಆರು ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.