ADVERTISEMENT

ಧಾರವಾಡ | ಮೇಕೆದಾಟು: ಕಾಂಗ್ರೆಸ್‌ ಒತ್ತಡಕ್ಕೆ ಮಣಿದಿಲ್ಲ

ನೀರಾವರಿ ಯೋಜನೆ: ರಾಜಿ ಇಲ್ಲ l ಕಳಸಾ ಬಂಡೂರಿ ಕಾಮಗಾರಿ ಶೀಘ್ರ : ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 5:11 IST
Last Updated 7 ಮಾರ್ಚ್ 2022, 5:11 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ‘ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಕಾಮಗಾರಿ ತ್ವರಿತವಾಗಿ ಆರಂಭಿಸಲು ಬಜೆಟ್‌ನಲ್ಲಿ ಅನುದಾನ ನೀಡಿದ್ದು, ಈ ಸಂಬಂಧ ಕಾಂಗ್ರೆಸ್ ಪಾದಯಾತ್ರೆಯ ಒತ್ತಡಕ್ಕೆ ಮಣಿದಿಲ್ಲ’ ಎಂದರು..

‘ಮೇಕೆದಾಟು ಯೋಜನೆ ಇವತ್ತಿನದಲ್ಲ. ಕರ್ನಾಟಕ ವಿದ್ಯುತ್ ನಿಗಮವು 1996ರಲ್ಲಿ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಮುಂದಾಗಿತ್ತು. ಆದರೆ, ಐದು ವರ್ಷಗಳಾದರೂ ಸಿದ್ಧಗೊಂಡಿರಲಿಲ್ಲ. ನಂತರ ಸಿದ್ಧಗೊಂಡಿದ್ದ ಡಿಪಿಆರ್ ಬದಲಿಸುವಂತೆ 2012ರಲ್ಲಿ ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಸೂಚಿಸಿದ್ದೆ. ಇದೀಗ ಅಂತಿಮ ಹಂತಕ್ಕೆ ಬಂದಿದೆ’ ಎಂದರು.

ADVERTISEMENT

‘ಯಾವುದೇ ನದಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ನಿಗದಿತ ಮಾನದಂಡಗಳಿವೆ. ಕೃಷ್ಣಾ ನದಿ ಯೋಜನೆಯನ್ನು ಆ ಮಾನದಂಡಗಳಡಿ ತರಲು ಅಗತ್ಯವಿರುವ ತಾಂತ್ರಿಕ ಕಾರ್ಯಗಳನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಳಿಕ, ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು‌’ ಎಂದರು.

ಅಂತಿಮ ಹಂತದಲ್ಲಿ: ‘ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯ ನಿರಾಪೇಕ್ಷಣ ಪತ್ರ ಸಿಗಬೇಕಿದ್ದು, ಅಂತಿಮ ಹಂತದಲ್ಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚಿಸಿದ್ದು, ಅಧಿವೇಶನದ ನಂತರ ಮತ್ತೆ ಭೇಟಿ ಮಾಡುವೆ’ ಎಂದರು.

‘ನಮ್ಮ ಪಾಲಿನ 12 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಒಟ್ಟಾರೆ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬರಬೇಕಿದೆ. ತೀರ್ಪನ್ನು ರಾಜ್ಯ ಸೇರಿದಂತೆಮಹಾರಾಷ್ಟ್ರ ಮತ್ತು ಗೋವಾ ಒಪ್ಪಿಕೊಳ್ಳಬೇಕಾಗುತ್ತದೆ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ತಯಾರಾಗುವ ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ನಿರ್ಮಾಣ ಅಗತ್ಯವಾಗಿದೆ. ಪರಿಸರದ ಸವಾಲುಗಳನ್ನು ಇದೇ ವರ್ಷದಲ್ಲಿ ಪರಿಹರಿಸಿಕೊಂಡು ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಯಾರ ಮಧ್ಯಸ್ಥಿಕೆಯ ಅಗತ್ಯವಿಲ್ಲ’
ರಾಮನಗರ:
‘ಮೇಕೆದಾಟು ವಿಚಾರದಲ್ಲಿ ಯಾರ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಯೋಜನೆಗೆ ಅನುಮತಿ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

‘ಮೇಕೆದಾಟು ವಿಚಾರದಲ್ಲಿ ನಾವೇನು ಮಾಡುವ ಹಾಗಿಲ್ಲ. ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಕೇಂದ್ರ ಜಲಸಂಪನ್ಮೂಲ ಸಚಿವರ ಹೇಳಿಕೆ ಖಂಡನೀಯ‌. ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ತಮಿಳುನಾಡಿನವರು ಈ ಬಗ್ಗೆ ರಾಜಕೀಯ ಮಾಡುತ್ತಲೇ ಬಂದಿದ್ದಾರೆ. ಅವರು ಇದಕ್ಕೆ ಒಪ್ಪುವುದೂ ಇಲ್ಲ’ ಎಂದರು.

ಕನಕಪುರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರು ಹೀಗೆ ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನವಾಗಿ ಸಮ್ಮತಿಸಿರುವುದು ಸರಿಯಲ್ಲ. ಇದು ರಾಜ್ಯಕ್ಕೆ ಆಗಿರುವ ಅವಮಾನ. ಅವರು ಕೇಂದ್ರದಿಂದ ಎನ್ ಒಸಿ ಪಡೆಯಬೇಕು ಎಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.‌

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ಚರ್ಚೆ ಮಾಡುವುದಿದ್ದರೆ ನಾವ್ಯಾಕೆ ಕೇಂದ್ರದ ಬಳಿ ಹೋಗಬೇಕಿತ್ತು. ತಮಿಳುನಾಡು ಬಳಿ ಮಾತನಾಡುವ ಅಗತ್ಯ ಇಲ್ಲ. ಈ ವಿಚಾರದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸಬಾರದು’ ಎಂದರು‌.

ಕೇಂದ್ರ, ರಾಜ್ಯ ಸರ್ಕಾರಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ನೀರಾವರಿ ಸಚಿವರು ಕೂಡಲೇ ಕಾವೇರಿ ನೀರಾವರಿ ಸಮಿತಿ ಸಭೆ ಕರೆದು ಅನುಮೋದನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ನುಣುಚಿಕೊಳ್ಳುತ್ತಿದೆ’
ಬೆಂಗಳೂರು
: ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕಾದ ಕೇಂದ್ರ ಸರ್ಕಾರವೇ, ಅದನ್ನು ವಿವಾದವಾಗಿ ಬಿಂಬಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಮೇಕೆದಾಟು ಯೋಜನೆ ಕುರಿತಂತೆ ಶನಿವಾರ ನೀಡಿದ್ದ ಹೇಳಿಕೆಗೆ ಭಾನುವಾರ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಕೇಂದ್ರ ಸಚಿವರೇ ‘ವಿವಾದ’ ಎನ್ನುವ ಮೂಲಕ ನಮ್ಮ ಕುಡಿಯುವ ನೀರಿನ ಯೋಜನೆಗೆ ಬಿಕ್ಕಟ್ಟಿನ ಲೇಪನ ಹಚ್ಚಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಾಸ್ತವ ಏನು ಎಂಬುದನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಮೇಕೆದಾಟು ಯೋಜನೆಯ ಪ್ರಸ್ತಾವ ಈಗ ಕೇಂದ್ರ ಸರ್ಕಾರದ ಅಧೀನದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಕೊಳೆಯುತ್ತಿದೆ. ಅದಕ್ಕೆ ಒಪ್ಪಿಗೆ ನೀಡದೇ ಬಿಟ್ಟು, ಕರ್ನಾಟಕ ಮತ್ತು ತಮಿಳುನಾಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ. ಹಾಗಾದರೆ, ಯೋಜನೆಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

‘ಮೇಕೆದಾಟು ಯೋಜನೆಗೆ ₹ 1,000 ಕೋಟಿ ಅನುದಾನ ನೀಡಿರುವುದಾಗಿ ಬಿಜೆಪಿ ಬೀಗುತ್ತಿದೆ. ನಮ್ಮ ಪಾದಯಾತ್ರೆಯಿಂದಲೇ ಅನುದಾನ ದೊರಕಿದೆ ಎಂದು ಕಾಂಗ್ರೆಸ್‌ನವರು ಕುಣಿಯುತ್ತಿದ್ದಾರೆ. ಇಬ್ಬರೂ ಈಗ ಕೇಂದ್ರ ಸಚಿವರ ಹೇಳಿಕೆ ಕುರಿತು ಏನು ಪ್ರತಿಕ್ರಿಯೆ ನೀಡುತ್ತಾರೆ’ ಎಂದು ಕೇಳಿದ್ದಾರೆ. ಕೇಂದ್ರ ಸಚಿವರ ಹೇಳಿಕೆಯು ಮೇಕೆದಾಟು ವಿಚಾರದಲ್ಲಿ ಬಿಜೆಪಿಯ ನಿಲುವಿನ ಕುರಿತು ಸಂಶಯ ಮೂಡಿಸಿದೆ. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆಯ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್‌ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಅವರು ತಮಿಳುನಾಡು ಸರ್ಕಾರವನ್ನು ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.