ADVERTISEMENT

ಇತಿಹಾಸದಲ್ಲಿ ಟಿಪ್ಪು ಅಜರಾಮರ

ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:47 IST
Last Updated 20 ನವೆಂಬರ್ 2019, 16:47 IST
ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ, ಮುಖಂಡರು ಟಿಪ್ಪು ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ, ಮುಖಂಡರು ಟಿಪ್ಪು ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ, ಟಿಪ್ಪು ಜಯಂತಿ ನಿಷೇಧಿಸಬಹುದು. ಪಠ್ಯದಲ್ಲಿ ಅವರ ಇತಿಹಾಸವನ್ನು ತೆಗೆಯಬಹುದು. ಆದರೆ, ಚರಿತ್ರೆಯಲ್ಲಿ ಆತನ ಹೆಸರು ಅಜರಾಮರ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ ಹೇಳಿದರು.

ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕ ಬುಧವಾರ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಮಾತನಾಡಿದ ಅವರು, ‘ಜನಾನುರಾಗಿ ರಾಜನಾಗಿದ್ದ ಟಿಪ್ಪು ಜಯಂತಿಗೆ ಸರ್ಕಾರಗಳ ಹಂಗಿಲ್ಲ. ಕೋಮುವಾದಿಗಳು ಟಿಪ್ಪು ಇತಿಹಾಸವನ್ನು ತಿರುಚಿ, ಆತನ ಹೆಸರಿಗೆ ಮಸಿ ಬಳಿಯಬಹುದು. ಆದರೆ, ಜನ ಆತನ ಕೊಡುಗೆಗಳನ್ನು ಸದಾ ಸ್ಮರಿಸುತ್ತಾರೆ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ‘ಉತ್ತಮ ಆಡಳಿತಗಾರನಾಗಿದ್ದ ಟಿಪ್ಪು, ಮೈಸೂರು ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ದಿದ್ದ. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಬಳಸಿದ. ಇಂದು ನೂರಾರು ರೈತರ ಬದುಕಿಗೆ ಆಸರೆಯಾಗಿರುವ ರೇಷ್ಮೆಯನ್ನು ಪರಿಚಯಿಸಿದ. ಆ ಮೂಲಕ, ಕೃಷಿ ಕ್ಷೇತ್ರದ ಅಭಿವೃದ್ಧಿಗೂ ಮಹತ್ತರ ಕೊಡುಗೆ ನೀಡಿದ’ ಎಂದು ಸ್ಮರಿಸಿದರು.

ADVERTISEMENT

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾರುಖ್ ಮುಲ್ಲಾ, ‘ತಮ್ಮ ಅಸ್ತಿತ್ವಕ್ಕಾಗಿ ಚರಿತ್ರೆಯಲ್ಲಿ ಎಷ್ಟೋ ರಾಜರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದಾರೆ. ಆದರೆ, ಟಿಪ್ಪು ಎಂದಿಗೂ ಅಂತಹ ಕೆಲಸ ಮಾಡಲಿಲ್ಲ. ತನ್ನ ಮಕ್ಕಳನ್ನು ಒತ್ತೆ ಇಟ್ಟರೂ, ಭಾರತದಿಂದ ಬ್ರಿಟಿಷರನ್ನು ತೊಲಗಿಸಬೇಕೆಂಬ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ. ಕೊನೆಯುಸಿರಿರುವವರೆಗೂ ಹೋರಾಡಿ ರಣರಂಗದಲ್ಲೇ ಮಡಿದು ಅಪ್ರತಿಮ ಹೋರಾಟಗಾರನೆನಿಸಿಕೊಂಡ’ ಎಂದು ಬಣ್ಣಿಸಿದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ, ‘ಟಿಪ್ಪು ಎಲ್ಲಾ ಜಾತಿ ಮತ್ತು ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದ. ತನ್ನ ಅವಧಿಯಲ್ಲಿ 134 ದೇವಾಲಯಗಳು ಹಾಗೂ 34 ಮಸೀದಿಗಳ ನಿರ್ವಹಣೆಗಾಗಿ ಬೊಕ್ಕಸದಿಂದ ಹಣ ನೀಡುತ್ತಿದ್ದ. ಹಲವು ದೇವಾಲಯಗಳ ಜೀರ್ಣೋದ್ಧಾರಕ್ಕೆ ಉದಾರ ದೇಣಿಗೆ ನೀಡಿದ್ದ’ ಎಂದು ಹೇಳಿದರು.

ಮುಖಂಡರಾದ ಸದಾನಂದ ಡಂಗನವರ, ದಶರಥ ವಾಲಿ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ದೀಪಾ ಗೌರಿ, ನವೀದ್ ಮುಲ್ಲಾ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.