ADVERTISEMENT

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 7:20 IST
Last Updated 29 ನವೆಂಬರ್ 2019, 7:20 IST
   

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆಲ್ಲದಿದ್ದರೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಸವಾಲು ಹಾಕಿರುವ ಸಿದ್ದರಾಮಯ್ಯ ವಿರುದ್ದ ಸಚಿವ ಕೆ ಎಸ್‌ ಈಶ್ವರಪ್ಪ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಎಂಟು ಸ್ಥಾನ ಗೆಲ್ಲದಿದ್ದರೆ ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಈಶ್ವರಪ್ಪ, ‘ಉಪ ಚುನಾವಣೆ ಬಳಿಕ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಎಲ್ಲ ಕಡೆ ಹೇಳಿಕೊಳ್ಳುತ್ತಿದ್ದಾನೆ. ಇದನ್ನು ಭ್ರಮೆಯೋ, ಹಗಲು ಕನಸೋ ಗೊತ್ತಾಗುತ್ತಿಲ್ಲ,’ ಎಂದು ಹೇಳಿದ್ದಾರೆ.

‘ಉಪಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನ ಗೆಲ್ಲದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕಾಂಗ್ರೆಸ್‌ ಅಷ್ಟು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸವಾಲು ಒಪ್ಪಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.

ADVERTISEMENT

‘ಸಿದ್ದರಾಮಯ್ಯ ಒಬ್ಬ ಹುಚ್ಚ. ಸದಾ ಅಧಿಕಾರಕ್ಕೆ ಹಂಬಲಿಸುವ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದ ಹುಚ್ಚಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್‌ನ ಯಾವ ನಾಯಕರೂ ಅವರ ಜೊತೆಗಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಕುರುಬ ಹಾಗೂ ದಲಿತ ನಾಯಕರನ್ನು ಬೆಳೆಯಲು ಬಿಡಲಿಲ್ಲ. ವಿಶ್ವನಾಥ ಅವರನ್ನು ಮುಗಿಸಲು ಹೆಜ್ಜೆಹೆಜ್ಜೆಗೂ ಪ್ರಯತ್ನಿಸಿದರು’ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ಅಪ್ಪನನ್ನೇ ಗೆಲ್ಲಿಸಲು ಸಾಧ್ಯವಾಗದ ಕುಮಾರಸ್ವಾಮಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತಾರಾ? ಎಂದು ಇದೇ ವೇಳೆ ಈಶ್ವರಪ್ಪ ವ್ಯಂಗವಾಡಿದರು.

ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಣೆ ಮಾಡುವುದೇ ಸುಳ್ಳು

ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಣೆ ಮಾಡುವುದೇ ಸುಳ್ಳು. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.

‘ತಪ್ಪು ಅಂಕಿ ಅಂಶ ಮಾಹಿತಿ ನೀಡಿ ದಾರಿ ತಪ್ಪಿಸಲಾಗುತ್ತಿದೆ. ಆದರೆ, ಮೊದಲಿಗಿಂತಲೂ ಈಗ ಹೆಚ್ಚು ಶೌಚಾಲಯಗಳು ಇವೆ. ನಿರಂತರವಾಗಿ ನಿರ್ಮಾಣವಾಗುತ್ತಿವೆ. ಬಹಳಷ್ಟು ಜನ ಅವುಗಳನ್ನು ಬಳಸುತ್ತಿಲ್ಲ. ಜಾಗದ ಕೊರತೆ ಇದ್ದರೆ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಲಾಗುತ್ತಿದೆ. ಇವುಗಳ ನಿರ್ವಹಣೆ ಯಾರು ಮಾಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದರು.

‘ಪ್ರತಿ ಗ್ರಾಮ ‍ಪಂಚಾಯ್ತಿ ವ್ಯಾಪ್ತಿಯಲ್ಲಿ ಒಣ ಹಾಗೂ ಹಸಿ ಕಸ ಸಂಗ್ರಹ, ವಿದ್ಯುತ್‌ ಉದ್ದೇಶಕ್ಕೆ ಬಳಸಲು ಸೋಲಾರ್ ಅಳವಡಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ 6,021 ಗ್ರಾಮ ಪಂಚಾಯ್ತಿಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಪ್ರತಿ ಪಂಚಾಯ್ತಿಗೆ 20 ಲಕ್ಷ ರು. ಅನುದಾನ ನೀಡುತ್ತದೆ’ ಎಂದು ತಿಳಿಸಿದರು.

‘ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರು. ಅನುದಾನ ನೀಡಲಾಗಿದೆ. ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.