ADVERTISEMENT

‘ಶೆಟ್ಟರ್, ಜೋಶಿ ಶಿಷ್ಯರಿಂದ ಆಡಿಯೊ ಬಹಿರಂಗ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:59 IST
Last Updated 5 ನವೆಂಬರ್ 2019, 14:59 IST

ಹುಬ್ಬಳ್ಳಿ: ‘ವೈರಲ್ ಆಗಿರುವ ಬಿಜೆಪಿ ಸಭೆಯ ಆಡಿಯೊ ದನಿ ತಮ್ಮದೇ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಇದೀಗ ಉಲ್ಟಾ ಹೊಡೆಯುತ್ತಿರುವ ಅವರೊಂದಿಗೆ ಸಚಿವರು ಹಾಗೂ ಶಾಸಕರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೇಲೆ ಮುಗಿ ಬೀಳುತ್ತಿರುವುದು ಸರಿಯಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಟೀಕಿಸಿದ್ದಾರೆ.

‘ಆಡಿಯೊ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂಬ ಆರೋಪ ಹಾಸ್ಯಾಸ್ಪದ. ಈ ಕುರಿತು ಬಿಜೆಪಿಯ ಆಂತರಿಕ ಸಮಿತಿ ನಡೆಸಿರುವ ತನಿಖೆಯಲ್ಲಿ ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಶಿಷ್ಯರೇ ಆಡಿಯೊ ಬಹಿರಂಗಕ್ಕೆ ಕಾರಣರಾಗಿದ್ದಾರೆಂದು ತಿಳಿದು ಬಂದಿದೆ. ಅದಕ್ಕಾಗಿ ಶೆಟ್ಟರ್, ಸಿದ್ದರಾಮಯ್ಯ ವಿರುದ್ಧ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆ ಪಕ್ಷದೊಳಗೆ ಹುನ್ನಾರ ನಡೆಯುತ್ತಿರುವುದಕ್ಕೆ ಈ ಆಡಿಯೊ ಸಾಕ್ಷಿಯಾಗಿದೆ’ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಚಿವ ವಿ. ಸೋಮಣ್ಣ ಊಸರವಳ್ಳಿ ಇದ್ದಂತೆ. ಕಾಲಕ್ಕೆ ತಕ್ಕಂತ ನಿಷ್ಠೆ ಬದಲಿಸುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನವೀಳನ್‌ಕುಮಾರ್ ಕಟೀಲ್ ಕುಟಿಲ ವ್ಯಕ್ತಿತ್ವದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಸಂಸ್ಕಾರವಿಲ್ಲದ ಸಿ.ಟಿ. ರವಿ ಅವರಿಗೆ ಸಂಸ್ಕಾರವೇ ಇಲ್ಲ. ಹಾಗಾಗಿ, ಮನಬಂದಂತೆ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.