ಹುಬ್ಬಳ್ಳಿ: ಪೂರ್ವವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿಕ್ರಮಣಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಬೆಂಬಲ ನೀಡುತ್ತಿದ್ದಾರೆ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಶಾಸಕರ ಮಾತಿಗೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ವೀರಾಪುರ ಓಣಿಯಲ್ಲಿರುವ ಸರ್ಕಾರದ ಜಾಗವನ್ನು ಅತಿಕ್ರಮಣ ಮಾಡಲಾಗಿದೆ, ಬಂಕಾಪುರ ಚೌಕ್‌ದಲ್ಲಿರುವ ದರ್ಗಾದಿಂದ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ರಸ್ತೆ ಇಕ್ಕಟ್ಟು ಆದ ಕಾರಣ ರಾಷ್ಟ್ರೀಯ ಹೆದ್ದಾರಿ ತುಂಬಾ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇವುಗಳ ವಿರುದ್ಧ ಹೋರಾಟ ಮಾಡುವವರ ಮೇಲೆ ಶಾಸಕರು ಪೊಲೀಸ್ ಬಲ ಪ್ರಯೋಗ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.
‘ಬಂಕಾಪುರ ಚೌಕ್, ದರ್ಗಾ, ಕಮರಿಪೇಟೆ, ನ್ಯೂ ಇಂಗ್ಲಿಷ್ ಶಾಲೆ ಮತ್ತು ಇನ್ನಿತರ ರಸ್ತೆಗಳಲ್ಲಿ ಅತಿಕ್ರಮಣ ಮಾಡಿದ್ದನ್ನು ನಾವು ಪ್ರಶ್ನಿಸುವಂತಿಲ್ಲ. ಮೀನು ಮಾರುಕಟ್ಟೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಜನ ಹಾಗೂ ಅಧಿಕಾರಿಗಳು ಹೇಳಿದರೂ ಶಾಸಕರು ಕೇಳುತ್ತಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಧ್ಯೆ ಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.