ADVERTISEMENT

ಸ್ವಾಮೀಜಿ, ಉನ್ನತ ಸಮಿತಿ ಮೌನ ಮುರಿಯಲಿ: ಛಬ್ಬಿ

ಮೂರುಸಾವಿರ ಮಠದ ಆಸ್ತಿ ಪರಭಾರೆ ವಿವಾದ ಕುರಿತು ಭಕ್ತರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 15:05 IST
Last Updated 24 ಮಾರ್ಚ್ 2021, 15:05 IST

ಹುಬ್ಬಳ್ಳಿ: ‘ಮೂರುಸಾವಿರ ಮಠದ ಆಸ್ತಿ ಪರಭಾರೆಗೆ ಸಂಬಂಧಿಸಿದಂತೆ, ಮಠದ ಉನ್ನತ ಸಮಿತಿ ಹಾಗೂ ಸ್ವಾಮೀಜಿ ಮೌನ ಮುರಿಯಬೇಕು. ಈ ಕುರಿತು ನಡೆದಿರುವ ವ್ಯವಹಾರಗಳನ್ನು ಬಹಿರಂಗಗೊಳಿಸಿ, ಭಕ್ತರ ಗೊಂದಲವನ್ನು ಬಗೆಹರಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಒತ್ತಾಯಿಸಿದರು.

‘ಮಠವು ದಾನಿಗಳು ಹಾಗೂ ಭಕ್ತರಿಂದ ಬೆಳೆದಿದೆ. ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅನೇಕ ಆಸ್ತಿಗಳನ್ನು ದಾನ ಮಾಡಿದೆ. ಇತ್ತೀಚೆಗೆ ಕೆಎಲ್‌ಇ ಸಂಸ್ಥೆಗೆ ಕೊಟ್ಟಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಜತೆಗೆ, ಇನ್ನೂ ಅನೇಕ ಆಸ್ತಿಗಳನ್ನು ಪರಭಾರೆ ಮಾಡುವ ಹುನ್ನಾರ ನಡೆದಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಮಠದ ನಿರ್ವಹಣೆಗಾಗಿ ಉನ್ನತ ಮಟ್ಟದ ಸಮಿತಿ ಇದ್ದರೂ, ಅಲ್ಲಿನ ವ್ಯವಹಾರಗಳ ಬಗ್ಗೆ ಭಕ್ತರಲ್ಲಿ ನೂರೆಂಟು ಅನುಮಾನಗಳು ಮೂಡಿವೆ. ಈ ಕುರಿತು ಸ್ಪಷ್ಟನೆ ನೀಡಬೇಕಿದ್ದ ಸಮಿತಿ ಇದುವರೆಗೂ ಸಭೆ ನಡೆಸಿಲ್ಲ. ಸ್ವಾಮೀಜಿಯೂ ಮಾತನಾಡುತ್ತಿಲ್ಲ. ಹಾಗಾಗಿ, ಎಲ್ಲರೂ ರಾಜೀನಾಮೆ ನೀಡಿ, ಸಮಿತಿಯನ್ನು ವಿಸರ್ಜಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಆರಂಭದಲ್ಲೇ ವಿವಾದವನ್ನು ಸ್ವಾಮೀಜಿಯ ಗಮನಕ್ಕೆ ತಂದಾಗ, ಎಲ್ಲವನ್ನೂ ಬಗೆಹರಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಅವರು ಮಾತನಾಡಿಲ್ಲ. ಸದ್ಯದಲ್ಲೇ ಮತ್ತೆ ಸ್ವಾಮೀಜಿಯನ್ನು ಭೇಟಿ ಮಾಡಿ ಚರ್ಚಿಸಿ, ಮುಂದಿನ ಹೋರಾಟವನ್ನು ನಿರ್ಧರಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಮಾತನಾಡಿ, ‘ಆರ್ಥಿಕ ಸಂಕಷ್ಟದಲ್ಲಿರುವ ಮಠದ ಆಸ್ತಿಯನ್ನು ದಾನ ಮಾಡುವುದು ಎಷ್ಟು ಸರಿ? ಕೆಎಲ್‌ಇ ಸಂಸ್ಥೆ ಸೇರಿದಂತೆ ಮಠದ 170 ಆಸ್ತಿಗಳು ಬೇರೆಯವರ ಕೈಲಿವೆ. ಸಂಕಷ್ಟದಲ್ಲಿರುವ ಮಠದ ಆಸ್ತಿಯನ್ನು ದಾನವಾಗಿ ಪಡೆಯುವ ಅಗತ್ಯ ಕೆಎಲ್‌ಇಗೆ ಏನಿತ್ತು? ಮಠದ ಆಸ್ತಿಯನ್ನು ಕಾಣದ ಕೈಗಳು ಪರಭಾರೆ ಮಾಡುತ್ತಿವೆ. ಮಠಕ್ಕೆ ದ್ರೋಹ ಬಗೆದವರಿಗೆ ಒಳ್ಳೆಯದಾಗುವುದಿಲ್ಲ’ ಎಂದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ‘ಮಠ ಹಾಗೂ ಆಸ್ತಿಯನ್ನು ಉಳಿಸಬೇಕು. ಅದಕ್ಕಾಗಿ ಭಕ್ತರ ಜತೆ ಸಭೆ ನಡೆಸಿ, ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ,ಮುಖಂಡರಾದಶಿವಾನಂದ ಅಂಬಡಗಟ್ಟಿ,ನಾಗರಾಜ ಗೌರಿ,ಪ್ರಕಾಶ ಬೆಂಡಿಗೇರಿ,ಅರವಿಂದ ಕಟಗಿ ಮುಂತಾದವರು ಇದ್ದರು.

ಆಸ್ತಿ ಹಿಂಪಡೆಯಲು ನಿರ್ಣಯ

ಮಠದ ಆಸ್ತಿ ಪರಭಾರೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ನಾಗರಾಜ ಛಬ್ಬಿ ನೇತೃತ್ವದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು.

‘ಮಠದಿಂದ ದಾನವಾಗಿ ಕೊಟ್ಟಿರುವ ಆಸ್ತಿಯನ್ನು ಮರಳಿ ಪಡೆಯುವುದು, ಮುಂದೆ ಮಠದ ಆಸ್ತಿ ಪರಭಾರೆಯಾಗದಂತೆ ನೋಡಿಕೊಳ್ಳುವುದು ಹಾಗೂ ಮಠದ ರಕ್ಷಣೆಗಾಗಿ ಭಕ್ತರೊಂದಿಗೆ ಹೋರಾಟ ಮಾಡುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ’ ಎಂದು ಛಬ್ಬಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.