ADVERTISEMENT

ಹುಬ್ಬಳ್ಳಿ | ಶಿಕ್ಷಣ ಇಲಾಖೆ ಜಾಲತಾಣ: ಕಾಲಕಾಲಕ್ಕಿಲ್ಲ ವೆಬ್‌ಸೈಟ್‌ ನವೀಕರಣ

ಒಂಬತ್ತು ಶೈಕ್ಷಣಿಕ ಜಿಲ್ಲಾವ್ಯಾಪ್ತಿ

ರಾಮಕೃಷ್ಣ ಸಿದ್ರಪಾಲ
Published 25 ಜನವರಿ 2022, 3:05 IST
Last Updated 25 ಜನವರಿ 2022, 3:05 IST
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ವೆಬ್‌ಸೈಟ್ ಪುಟ
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ವೆಬ್‌ಸೈಟ್ ಪುಟ   

ಹುಬ್ಬಳ್ಳಿ: ‘ಉತ್ತಮ ಮಾನವರ ಉತ್ಪಾದಕ ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರು ಆಗಲು ಸಕ್ರಿಯಗೊಳಿಸಲು ಮತ್ತು ಅವರು ಏನೇ ಶ್ರೇಷ್ಠತೆಯನ್ನು ಸಾಧಿಸಲು ನಿರ್ದಿಷ್ಟ ಜ್ಞಾನ, ಕೌಶಲ್ಯಗಳ ಮತ್ತು ಮೌಲ್ಯಗಳ ಮಕ್ಕಳನ್ನಾಗಿ ಸಜ್ಜುಗೊಳಿಸುವುದು ಆಗಿದೆ’

–ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ವಿಷನ್‌ ಮತ್ತು ಮಿಷನ್‌ನ ಘೋಷವಾಕ್ಯ!

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರನ್ನು ತಯಾರು ಮಾಡುವ ಹಾಗೂ ಶೈಕ್ಷಣಿಕ ಸಮೂಹದ ಸಂಪೂರ್ಣ ಮೇಲ್ವಿಚಾರಣೆ ನಡೆಸುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಕಣ್ಣಿಗೆ ಕಾಣುವಂತಿರುವ ಈ ವಾಕ್ಯವನ್ನು ಓದಿದರೆ ಅಯ್ಯೋ ಕನ್ನಡವೇ ಅಂತ ಅನ್ನಿಸದೇ ಇರದು. ಈ ಜಾಲತಾಣವು ಸರಿಯಾದ ನಿರ್ವಹಣೆ ಇಲ್ಲದೇ ಸೊರಗಿದ್ದು ಒಂದೆಡೆಯಾದರೆ ಕನ್ನಡದ ಮೇಲಿನ ಅಸಡ್ಡೆ ಕಣ್ಣಿಗೆ ರಾಚುವಂತಿದೆ.

ADVERTISEMENT

ಧಾರವಾಡ, ಬೆಳ
ಗಾವಿ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಶಿರಸಿ, ಕಾರವಾರ– ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿದೆ. ಕನ್ನಡದಲ್ಲಿಯೇ ಹೆಚ್ಚು ವ್ಯವಹರಿಸುವ, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕಿದ್ದ ಇಲಾಖೆಯ ಜಾಲ
ತಾಣದಲ್ಲಿ ಕನ್ನಡಕ್ಕೆ ಆದ್ಯತೆ ಅಷ್ಟಕ್ಕಷ್ಟೆ.

ಆ ವೆಬ್‌ಸೈಟ್‌ ಬಗ್ಗೆ ಎಷ್ಟು ನಿರ್ಲಕ್ಷ್ಯವಿದೆ ಅಂದರೆ, ಈಗಲೂ ಮೇಜರ್‌ ಸಿದ್ದಲಿಂಗಯ್ಯ ಅವರೇ ಹೆಚ್ಚುವರಿ ಆಯುಕ್ತರು! ಅವರು ಆ ಹುದ್ದೆ
ಯಿಂದ ವರ್ಗಾವಣೆಗೊಂಡು 4–5 ತಿಂಗಳುಗಳಾಗುತ್ತ ಬಂದರೂ ಈಗಲೂ ಅವರದೇ ಫೋಟೊ, ಹೆಸರು ರಾರಾಜಿಸುತ್ತಿದೆ. ಗ್ಯಾಲರಿಯಲ್ಲಿ ಅವರದೇ ಕಾರ್ಯಕ್ರಮದ ಫೋಟೊಗಳು. ಹೊಸ ಆಯುಕ್ತರು ಅಧಿಕಾರ ವಹಿಸಿಕೊಂಡರೂ ಅವರ ಹೆಸರು ಕೂಡ ಅಲ್ಲಿ ಅಪ್‌ಡೇಟ್ ಆಗಿಲ್ಲ.

ವೆಬ್‌ಸೈಟ್‌ನಲ್ಲಿ ‘ಕನ್ನಡದಲ್ಲಿ ವೀಕ್ಷಿಸು’ ಎಂಬ ಕೊಂಡಿ ಕ್ಲಿಕ್ಕಿಸಿದರೆ ಅಕ್ಷರ ದೋಷ, ಹಳೆ ಮಾಹಿತಿಗಳ ಸರಮಾಲೆಯೇ ಸ್ವಾಗತಿಸುತ್ತದೆ. ದೃಷ್ಟಿ ಮತ್ತು ಕ್ರೀಯೆ (ಕ್ರಿಯೆ), ಫೂಟೂ (ಫೋಟೊ), ನಾಯ್ಯಾಲಯ(ನ್ಯಾಯಾಲಯ), ಪಾರ್ಮ್ಸ (ಫಾರ್ಮ್ಸ್)...ಹೀಗೆ ಕನ್ನಡದ ಪದಗಳ ದೋಷಗಳೇ ಉಳಿದಿವೆ. ಜತೆಗೆ 2020ರ ಮಾಹಿತಿಗಳೇ ಅಲ್ಲಿವೆ. ಹೆಚ್ಚಿನ ಮಾಹಿತಿಗಳು ಇಂಗ್ಲಿಷ್‌ನಲ್ಲಿ ಮಾತ್ರ.

ಪ್ರತಿದಿನ ನೂರಾರು ಮಂದಿ ಈ ವೆಬ್‌ಸೈಟ್‌ಗೆ ಭೇಟಿ ನೀಡುವುದು ಅಲ್ಲಿರುವ ಹಿಟ್ಸ್‌ ಗಮನಿಸಿದರೆ ಅರಿವಾಗುತ್ತದೆ. ಈ ವೆಬ್‌ಸೈಟ್‌ ಅನ್ನು ಈವರೆಗೆ 2 ಲಕ್ಷಕ್ಕೂ ಹೆಚ್ಚುಮಂದಿ ಕ್ಲಿಕ್ಕಿಸಿದ್ದಾರೆ. (ಈ ವರದಿ ಸಿದ್ಧವಾಗುವ ವೇಳೆಗೆ 2,09,800 ಹಿಟ್ಸ್ ಇದ್ದವು).ಅಷ್ಟಕ್ಕೂ ಈ ವೆಬ್‌ಸೈಟ್ ಅನ್ನು ವಿನ್ಯಾಸಗೊಳಿಸಿದ್ದು ಹಾ‌ಗೂ ಅಭಿವೃದ್ಧಿಪಡಿಸಿದ್ದು ಧಾರವಾಡದ ಎಸಿಪಿಐ ಇ–ಗವರ್ನೆನ್ಸ್‌ ವಿಭಾಗವೇ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಲಯದ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್‌. ಬಿರಾದಾರ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರ ಫೋನ್ ಸ್ವಿಚ್ಡ್ ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.