ADVERTISEMENT

ಪ್ರತಾಪಗೌಡಗೆ ಮಸ್ಕಿ ಟಿಕೆಟ್‌: ಸಚಿವ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 11:50 IST
Last Updated 28 ಅಕ್ಟೋಬರ್ 2020, 11:50 IST

ಹುಬ್ಬಳ್ಳಿ: ಪ್ರತಾಪಗೌಡ ಪಾಟೀಲ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿದ್ದರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಮುಂಬರುವ ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಿಂದಿನ ಚುನಾವಣೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆಲುವು ಪಡೆದಿದ್ದ ಪ್ರತಾಪಗೌಡ ಪಾಟೀಲ ಮತ್ತು ಕಡಿಮೆ ಅಂತರದಿಂದ ಸೋತಿದ್ದ ಬಿಜೆಪಿಯ ಬಸನಗೌಡ ತುರ್ವಿಹಾಳ ಇಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೇ ಟಿಕೆಟ್‌ ನೀಡಬೇಕು ಎನ್ನುವುದು ಮೊದಲೇ ನಿರ್ಧರಿತವಾಗಿತ್ತು’ ಎಂದರು.

ಈ ಕುರಿತು ಚರ್ಚಿಸಲು ಮಂಗಳವಾರ ರಾತ್ರಿ ನಗರದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಜೊತೆ ಸಭೆ ನಡೆಯಿತು.

ADVERTISEMENT

ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದರ ಬಗ್ಗೆ ಪ್ರತಿಕ್ರಿಯಿಸಿ ‘ದೊಡ್ಡ ಪಕ್ಷವೆಂದ ಮೇಲೆ ಬಹಳಷ್ಟು ಜನ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಮಸ್ಕಿ ಕ್ಷೇತ್ರದ ಇಬ್ಬರೂ ಆಕಾಂಕ್ಷಿಗಳನ್ನು ಕರೆಯಿಸಿ ಕಟೀಲ್‌ ಮಾತನಾಡಿದ್ದಾರೆ. ಸಮಸ್ಯೆ ಪರಿಹಾರವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.