ADVERTISEMENT

ಪಾಲಿಕೆ ಚುನಾವಣೆ ಹೊಸ ಮುಖಗಳಿಗೆ ಅವಕಾಶ

ಪ್ರಮುಖ ಪಕ್ಷಗಳಿಗೆ ಬಂಡಾಯದ ಬಿಸಿ; ಟಿಕೆಟ್ ಸಿಗದವರ ಸ್ವತಂತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 13:07 IST
Last Updated 23 ಆಗಸ್ಟ್ 2021, 13:07 IST
ಧಾರವಾಡದ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಹಾಗೂ ಸೂಚಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಜನದಟ್ಟಣೆ ಉಂಟಾಯಿತು
ಧಾರವಾಡದ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಹಾಗೂ ಸೂಚಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಜನದಟ್ಟಣೆ ಉಂಟಾಯಿತು   

ಧಾರವಾಡ: ಅಭ್ಯರ್ಥಿಗಳ ಬಂಡಾಯ, ಪಕ್ಷಗಳು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಸರು ಹೊಂದಿದ ಕೆಲವರಿಗೆ ಬಿ–ಫಾರ್ಮ್ ಸಿಗದೆ ಆಘಾತ, ರಾತ್ರೋರಾತ್ರಿ ಪಕ್ಷಗಳ ಬದಲಾವಣೆ, ಟಿಕೆಟ್ ನೀಡಿದ ಪಕ್ಷದ ವಿರುದ್ಧ ಆಕ್ರೋಶ...

ಇವಿಷ್ಟು ಪಾಲಿಕೆ ಕಚೇರಿ ಎದುರು ಸೋಮವಾರ ಕಂಡುಬಂದ ದೃಶ್ಯ. ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ್ದರಿಂದ ಇಂಥ ಬಹಳಷ್ಟು ನಾಟಕೀಯ ಬೆಳವಣಿಗೆಗಳಿಗೆ ಆವರಣ ಸಾಕ್ಷಿಯಾಯಿತು.

ಸೋಮವಾರ ನಸುಕಿನವರೆಗೂ ಪಕ್ಷಗಳ ಬಿ–ಫಾರ್ಮ್‌ಗಾಗಿ ತೆರೆಮರೆಯ ಗುದ್ದಾಟಗಳು ನಡೆದವು. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾಗಿದ್ದ ಸುಭಾಸ ಶಿಂಧೆ ಕೊನೆ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಫಲರಾದರು. ಮತ್ತೊಂದೆಡೆ ಪಾಲಿಕೆ ಹಿಂದಿನ ಅವಧಿಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಯಾಸೀನ್ ಹಾವೇರಿಪೇಟ ಅವರು ಪ್ರತಿನಿಧಿಸುವ ವಾರ್ಡ್‌ 6 ಹಿಂದುಳಿದ ’ಅ’ ವರ್ಗಕ್ಕೆ ಮೀಸಲಾಗಿದ್ದರಿಂದ ಅವರ ಪತ್ನಿಗೆ ಟಿಕೆಟ್ ಕೋರಿದ್ದರು. ಆದರೆ ಟಿಕೆಟ್ ಸಿಗದಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ವಾರ್ಡ್‌ 8ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಹೆಸರಿದ್ದ ಪ್ರಕಾಶ ಘಾಟಗೆ ಬಿ–ಫಾರ್ಮ್‌ ಸಿಗದೆ ಕೊನೆ ಕ್ಷಣದ ಆಘಾತ ಎದುರಾಗಿದ್ದರಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ADVERTISEMENT

ಮತ್ತೊಂದೆಡೆ ಬಿಜೆಪಿಯಲ್ಲೂ ಟಿಕೆಟ್ ವಂಚಿತ ಆಕಾಂಕ್ಷಿಗಳಲ್ಲಿ ಕೆಲವರು ಬಂಡಾಯ ಅಭ್ಯರ್ಥಿಯಾದರೆ, ಇನ್ನೂ ಕೆಲವರು ತಟಸ್ಥ ಧೋರಣೆ ತೆಳೆಯುವ ಮೂಲಕ ಟಿಕೆಟ್ ಸಿಗದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹಲವರಿಗೆ ರಾತ್ರೋರಾತ್ರಿ ವಾರ್ಡ್ ಬದಲಾವಣೆ ಮಾಡಲಾಗಿದೆ. ಸಂಜಯ ಕಪಟ್ಕರ್ ಅವರು ಈ ಮೊದಲು ವಾರ್ಡ್ 15ರಿಂದ ಸ್ಪರ್ಧಿಸುತ್ತಿದ್ದರು. ಮೊದಲ ಪಟ್ಟಿಯಲ್ಲಿ ಅವರ ಹೆಸರು ಇದೇ ವಾರ್ಡ್‌ಗೇ ಸೂಚಿತವಾಗಿತ್ತು. ಕೊನೆ ಕ್ಷಣದಲ್ಲಿ ವಾರ್ಡ್ 23ಕ್ಕೆ ಪಕ್ಷವು ಅವರಿಗೆ ಬಿ–ಫಾರ್ಮ್ ನೀಡಿದೆ.

ಮಾಜಿ ಮೇಯರ್ ಮಂಜುಳಾ ಅಕ್ಕೂರ ಅವರು ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಹೀಗಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಉದಯ ಲಾಡ್ ವಾರ್ಡ್ 15ರಿಂದ ಸ್ಪರ್ಧಿಸಿದ್ದಾರೆ. ರಾಜು ಕೋಟೆಣ್ಣವರ, ಬಲರಾಮ ಕುಸಗಲ್, ಭೀಮು ಸುಣಗಾರ್, ಮೋಹನ ರಾಮದುರ್ಗ, ಪೂರ್ಣಾ ಪಾಟೀಲ, ಮಂಜುನಾಥ ನಡಟ್ಟಿ, ಮಂಜುನಾಥ ಚೋಳಪ್ಪನವರ, ವೀರಣ್ಣಾ ಹಪ್ಪಳಿ, ನಿರ್ಮಲಾ ಜವಳಿ ಮೊದಲಾದವರಿಗೆ ಬಿಜೆಪಿ ಟಿಕೆಟ್ ನೀಡದೆ ಆಘಾತ ನೀಡಿದೆ. ಇವರ ಜಾಗದಲ್ಲಿ ಈ ಬಾರಿ ಹೊಸ ಮುಖಗಳಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ.

ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿ ಹೊರಬಂದ ಸುಭಾಸ ಶಿಂಧೆ, ’ಈ ಬಾರಿ ಟಿಕೆಟ್‌ಗಳು ಮಾರಾಟವಾಗಿವೆ. ಪಕ್ಷ ನಿಷ್ಠೆ, ಕ್ಷೇತ್ರದಲ್ಲಿ ಮಾಡಿರುವ ಕೆಲಸ ಮತ್ತು ಜನಪ್ರಿಯತೆಯನ್ನು ಕಾಂಗ್ರೆಸ್‌ ಮುಖಂಡರು ಪರಿಗಣಿಸಿಲ್ಲ. ಸ್ಥಳೀಯ ಮುಖಂಡರು ಹಣ ಪಡೆದು ತಮಗೆ ಬೇಕಾದವರಿಗೆ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಆರ್.ವಿ.ದೇಶಪಾಂಡೆ ಅವರ ದಿಕ್ಕು ತಪ್ಪಿಸಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಈ ಚುನಾವಣೆಯಲ್ಲಿ ಅಭ್ಯರ್ಥಿ ಮಾಡಿರುವ ಕೆಲಸ ಮುಖ್ಯವಾಗಲಿದೆಯೇ ಹೊರತು ಪಕ್ಷವಲ್ಲ. ಹೀಗಾಗಿ ನಾನು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ. ಕಾಂಗ್ರೆಸ್‌ಗೆ ಸೋಲಿನ ಮೂಲಕ ಆತ್ಮಾವಲೋಕನಕ್ಕೆ ಅವಕಾಶ ನೀಡಲಿದೆ’ ಎಂದು ಕಿಡಿ ಕಾರಿದರು.

ಜೆಡಿಎಸ್, ಎಎಪಿ ಸೇರಿದಂತೆ ಹಲವು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಪಾಲಿಕೆ ಆವರಣದಲ್ಲಿ ಮಾಸ್ಕ್ ಧರಿಸಿದವರಿಗೆ ಎಚ್ಚರಿಕೆ ನೀಡುವ ಮತ್ತು ದಂಡ ವಿಧಿಸಲು ಮಾರ್ಷಲ್‌ಗಳ ನಿಯೋಜನೆಗೊಂಡಿದ್ದರು. ಅಭ್ಯರ್ಥಿಗಳೊಂದಿಗೆ ಕೇವಲ ಐದು ಜನಕ್ಕೆ ಮಾತ್ರ ಅವಕಾಶವಿದ್ದರೂ, ಮುಖ್ಯ ದ್ವಾರದ ಹೊರತೆ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮಾಸ್ಕ್ ಹಾಗೂ ಅಂತರ ಮಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.