ADVERTISEMENT

ಹುಬ್ಬಳ್ಳಿ: ಶೇ 50ರಷ್ಟು ಮಕ್ಕಳಷ್ಟೇ ಶಾಲೆಗೆ ಹಾಜರು

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 5:20 IST
Last Updated 25 ಜನವರಿ 2022, 5:20 IST
ಹುಬ್ಬಳ್ಳಿಯ ಉಣಕಲ್‌ನ ರಾಚಯ್ಯ ಚನ್ನಯ್ಯ ಚಿಕ್ಕಮಠ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಅಂತರ ಕಾಪಾಡಿಕೊಂಡು ತರಗತಿಯಲ್ಲಿ ಪಾಲ್ಗೊಂಡರು
ಹುಬ್ಬಳ್ಳಿಯ ಉಣಕಲ್‌ನ ರಾಚಯ್ಯ ಚನ್ನಯ್ಯ ಚಿಕ್ಕಮಠ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಅಂತರ ಕಾಪಾಡಿಕೊಂಡು ತರಗತಿಯಲ್ಲಿ ಪಾಲ್ಗೊಂಡರು   

ಹುಬ್ಬಳ್ಳಿ: ಕೋವಿಡ್‌ ಕಾರಣಕ್ಕೆ ರಜೆ ಘೋಷಣೆಯಾಗಿದ್ದ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಸೋಮವಾರ 1ರಿಂದ 8ನೇ ತರಗತಿಗಳು ಪುನರಾರಂಭವಾಗಿದ್ದು, ಬಹುತೇಕ ಶಾಲೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಹಾಜರಾತಿ ಕಂಡುಬರಲಿಲ್ಲ.

ಸೋಂಕು ವೇಗವಾಗಿ ಹರಡುತ್ತಿರುವ ಕಾರಣಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ. ಹುಬ್ಬಳ್ಳಿ ನಗರದ ಎಂಟು ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದ್ದರಿಂದ ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕಿನ ಸಾಮಾನ್ಯ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಮನೆಯಲ್ಲಿ ಉಪಚರಿಸಿ ಎಂದು ಹಲವು ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರಿಗೆ ತಿಳಿಸಿದ್ದರು. ಆದ್ದರಿಂದ ಹುಬ್ಬಳ್ಳಿ ನಗರದಲ್ಲಿ ಶೇ 50ರಿಂದ ಶೇ 60ರಷ್ಟು ಮಕ್ಕಳಷ್ಟೇ ಶಾಲೆಗೆ ಬಂದಿದ್ದರು. ಧಾರವಾಡ ನಗರದಲ್ಲಿಯೂ ಇದೇ ಸ್ಥಿತಿಯಿತ್ತು. ಶಾಲಾ ಸಿಬ್ಬಂದಿ ಮೊದಲಿಗಿಂತಲೂ ಹೆಚ್ಚು ಕಾಳಜಿ ವಹಿಸಿ ಕೋವಿಡ್ ನಿಯಮ ಪಾಲನೆಗೆ ಒತ್ತು ಕೊಟ್ಟಿದ್ದು ಕಂಡು ಬಂತು.

ADVERTISEMENT

‘ಸೋಮವಾರ ಎರಡು ಶಾಲೆಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಪೂರ್ಣಪ್ರಮಾಣದಲ್ಲಿ ಮಕ್ಕಳು ಇರಲಿಲ್ಲ. ಶಾಲೆ ಪುನರಾರಂಭದ ಮೊದಲ ದಿನ ಮಕ್ಕಳ ಸಂಖ್ಯೆ ಕಡಿಮೆ ಇರುವುದು ಸಾಮಾನ್ಯ. ಕೋವಿಡ್‌ ಬಗ್ಗೆ ಆತಂಕವಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ನಿಧಾನವಾಗಿ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ‘ ಎಂದುಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ತಿಳಿಸಿದರು.

’ಶಾಲೆಯಲ್ಲಿ ಕೋವಿಡ್‌ ನಿಯಮ ಪಾಲಿಸಲು ಒತ್ತು ಕೊಟ್ಟಿದ್ದೇವೆ. ಆಯಾ ತರಗತಿಗಳಲ್ಲಿಯೇ ದಿನದ ಪ್ರಾರ್ಥನೆ ಮಾಡಿಸಿದ್ದೇವೆ. ಆದರೂ ಮೊದಲ ದಿನ ಶೇ 50ರಷ್ಟು ಮಕ್ಕಳು ಮಾತ್ರ ಶಾಲೆಗೆ ಬಂದಿದ್ದರು‘ ಎಂದು ಉಣಕಲ್‌ನ ರಾಚಯ್ಯ ಚನ್ನಯ್ಯ ಚಿಕ್ಕಮಠ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿಗೀತಾ ಚುಳಕಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.