ADVERTISEMENT

ಆರ್‌ಟಿಇ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 11:26 IST
Last Updated 22 ಮಾರ್ಚ್ 2019, 11:26 IST
ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳಿಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪೋಷಕರು ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳಿಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪೋಷಕರು ಹುಬ್ಬಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಶಿಕ್ಷಣ ಹಕ್ಕು ಕಾಯ್ದೆ ನಿಯಮಗಳಿಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪೋಷಕರು ನಗರದಲ್ಲಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.

ವಾರ್ಡ್‌ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇದ್ದರೆ, ಖಾಸಗಿ ಶಾಲೆಗೆ ಪ್ರವೇಶ ಇಲ್ಲ ಎಂದು ತಿದ್ದುಪಡಿ ನಿಯಮ ಹೇಳುತ್ತದೆ. ಪರಿಣಾಮ ಯಾವೊಬ್ಬ ಬಡ ವಿದ್ಯಾರ್ಥಿಗೂ ಖಾಸಗಿ ಶಾಲೆಯಲ್ಲಿ ಪ್ರವೇಶ ಸಿಗುತ್ತಿಲ್ಲ. ಉತ್ತಮ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಬಹುದು ಎಂಬ ಬಡ ಪೋಷಕರ ಕನಸಿಗೆ ಸರ್ಕಾರ ತಣ್ಣೀರೆರಚಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್‌ಕೆಜಿಗೆ ಮಗುವನ್ನು ಖಾಸಗಿ ಶಾಲೆಗೆ ಸೇರಿಸಬೇಕೆಂದು ಅರ್ಜಿ ಹಾಕಲು ಹೋದಾಗ ಅವಕಾಶ ಇಲ್ಲ ಎಂದು ಗೊತ್ತಾಯಿತು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ– ಯುಕೆಜಿ ಇಲ್ಲ. ಆದ್ದರಿಂದ ಬಹಳ ತೊಂದರೆ ಆಗಿದೆ. ಹೆಚ್ಚಿನ ಹಣ ನೀಡಿನ ಖಾಸಗಿ ಶಾಲೆಗೆ ಕಳುಹಿಸುವಷ್ಟು ಶಕ್ತಿ ಇಲ್ಲ’ ಎಂದು ಶೀಲಾ ಉಳ್ಳಾಗಡ್ಡಿ ಹೇಳಿದರು.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರು ಸಹ ಇಲ್ಲ. ಪರಿಸ್ಥಿತಿ ಹೀಗಿರುವಾಗ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಹೇಗೆ? ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನನ್ನು ಹಿಂದಕ್ಕೆ ಪಡೆದು, ಮೊದಲಿನಂತೆ ಎಲ್ಲ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ತುಳಜಪ್ಪ ಉಳ್ಳಾಗಡ್ಡಿ ಒತ್ತಾಯಿಸಿದರು.

ಬಡವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಲು ಇದ್ದ ಅವಕಾಶವನ್ನು ಸರ್ಕಾರ ಕಿತ್ತುಕೊಂಡಿದೆ. ಬಡ ಮಕ್ಕಳು ಅನಿವಾರ್ಯವಾಗಿ ಮೂಲ ಸೌಕರ್ಯ ಇಲ್ಲದ ಸಮೀಪದ ಸರ್ಕಾರಿ ಶಾಲೆಯಲ್ಲಿ ಓದುವುದು ಅನಿವಾರ್ಯವಾಗಿದೆ ಎಂದು ಪ್ರಕಾಶ ಉಳ್ಳಾಗಡ್ಡಿ ಹೇಳಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.