ಹುಬ್ಬಳ್ಳಿ: ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಚಿಟಗುಪ್ಪಿ ಉದ್ಯಾನಕ್ಕೆ ಶೀಘ್ರ ಹೊಸ ರೂಪ ಸಿಗಲಿದೆ. ಪಾಲಿಕೆಯು ₹80 ಲಕ್ಷ ವೆಚ್ಚದಲ್ಲಿ ಉದ್ಯಾನದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಉದ್ಯಾನದ ಬಳಿ ಚಿಟಗುಪ್ಪಿ ಆಸ್ಪತ್ರೆ, ಮಹಾನಗರ ಪಾಲಿಕೆ ಕಚೇರಿ ಇದ್ದು, ಸಾರ್ವಜನಿಕರು, ರೋಗಿಗಳ ಸಂಬಂಧಿಕರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸಮರ್ಪಕ ನಿರ್ವಹಣೆ ಇಲ್ಲದೆ ಉದ್ಯಾನ ಹಾಳಾಗಿದ್ದರಿಂದ ಸಾರ್ವಜನಿಕರು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಕಾಂಪೌಂಡ್ ಒಡೆದಿದ್ದರಿಂದ ಈ ಸ್ಥಳ ವಾಹನ ನಿಲುಗಡೆ ತಾಣವಾಗಿಯೂ ಮಾರ್ಪಟ್ಟಿತ್ತು.
ಪಾಲಿಕೆಯು ಉದ್ಯಾನದ ಅಭಿವೃದ್ಧಿಗೆ ಮುಂದಾಗಿದೆ. ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಆರಂಭವಾಗಿದೆ. ಉದ್ಯಾನದ ಸುತ್ತ ಗ್ರಿಲ್ ಅಳವಡಿಕೆ, ನೀರಿನ ಕೊಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
34,932 ಚದರ ಅಡಿ ವಿಸ್ತೀರ್ಣದಲ್ಲಿರುವ ಉದ್ಯಾನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ನೆಲಹಾಸು, ನಡಿಗೆ ಪಥ, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಆಟಿಕೆ ಸಾಮಗ್ರಿಗಳು, ಜೋಕಾಲಿ ಅಳವಡಿಕೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಕೆಲವೇ ತಿಂಗಳಲ್ಲಿ ಲ್ಯಾಮಿಂಗ್ಟನ್ ರಸ್ತೆಯಲ್ಲಿಯೂ ಮೇಲ್ಸೇತುವೆ ಕಾಮಗಾರಿಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಆ ನಿಟ್ಟಿನಲ್ಲಿ ಜಾಗ ಬಿಟ್ಟು ಉದ್ಯಾನದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಅವರು.
‘ಚಿಟಗುಪ್ಪಿ ಉದ್ಯಾನ ನಗರದ ಮೊದಲ ಉದ್ಯಾನ ಎಂಬ ಹೆಗ್ಗಳಿಕೆ ಹೊಂದಿದೆ. ಉದ್ಯಾನದಲ್ಲಿ ಆಕರ್ಷಕ ಕಾರಂಜಿ ಇತ್ತು. ಪಾಲಿಕೆಗೆ ವಿವಿಧ ಕೆಲಸಕ್ಕೆ ಬಂದವರು, ಹಿರಿಯ ನಾಗರಿಕರು ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಈಗಲಾದರೂ ಪಾಲಿಕೆ ಅಧಿಕಾರಿಗಳು ಉದ್ಯಾನ ಅಭಿವೃದ್ಧಿ ಮಾಡುತ್ತಿರುವುದು ಒಳ್ಳೆಯ ಕಾರ್ಯ. ಉದ್ಯಾನದ ಗತವೈಭವ ಮತ್ತೆ ಮರಳಲಿ’ ಎಂದು ಮಾಜಿ ಮೇಯರ್ ಪಾಂಡುರಂಗ ಪಾಟೀಲ ಹೇಳಿದರು.
‘ಇಂದಿರಾ ಗಾಜಿನ ಮನೆ ಉದ್ಯಾನ ಸೇರಿದಂತೆ ಇತರ ಉದ್ಯಾನಗಳ ನಿರ್ವಹಣೆ ಸಹ ಸರಿಯಾಗಿ ಆಗುತ್ತಿಲ್ಲ. ಉದ್ಯಾನಗಳು ಅಭಿವೃದ್ಧಿಯಾದರೆ ನಗರದ ಅಂದ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಪಾಲಿಕೆಯವರು ನಗರದ ಎಲ್ಲ ಉದ್ಯಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ಆಗ್ರಹ.
‘ಸಾಕಷ್ಟು ವೆಚ್ಚ ಮಾಡಿ ಉದ್ಯಾನ ಅಭಿವೃದ್ಧಿಪಡಿಸಿ ಸುಮ್ಮನಾದರೆ ಸಾಲದು. ಆ ನಂತರ ಅದು ಸರಿಯಾಗಿ ನಿರ್ವಹಣೆಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು’ ಉದ್ಯಾನ ಬಳಿಯ ಅಂಗಡಿ ವ್ಯಾಪಾರಿ ರಾಮಚಂದ್ರ ಹೇಳಿದರು.
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅನುದಾನದಡಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು-ರುದ್ರೇಶ ಘಾಳಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಉದ್ಯಾನಕ್ಕಿದೆ ಸುದೀರ್ಘ ಇತಿಹಾಸ ಚಿಟಗುಪ್ಪಿ ಉದ್ಯಾನಕ್ಕೆ ಲೇಡಿ ಸೈಕ್ಸ್ ಉದ್ಯಾನ ಎಂದೂ ಕರೆಯಲಾಗುತ್ತದೆ. ಬಾಂಬೆ ಸರ್ಕಾರದ ಗವರ್ನರ್ ಆಗಿದ್ದ ಫ್ರೆಡ್ರಿಕ್ ಹಗ್ ಸೈಕ್ಸ್ ಅವರು ತನ್ನ ಪತ್ನಿಯೊಂದಿಗೆ ಹುಬ್ಬಳ್ಳಿಗೆ ಭೇಟಿ ನೀಡಿದ್ದರ ನೆನಪಿಗಾಗಿ ಈ ಉದ್ಯಾನವನ್ನು ನಿರ್ಮಾಣ ಮಾಡಲಾಗಿತ್ತು. 1929ರ ನವೆಂಬರ್ 1ರಂದು ಇದು ಉದ್ಘಾಟನೆಯಾಗಿದೆ. ಅಲ್ಲದೆ 1933 1934 ಮತ್ತು 1938ರಲ್ಲಿ ಬಾಂಬೆ ಸರ್ಕಾರದ ಗವರ್ನರ್‌ಗಳು ಭೇಟಿ ನೀಡಿದ್ದರ ನೆನಪಿಗಾಗಿ ಮೂರು ಬೆಂಚ್‌ಗಳನ್ನು ಸಹ ಇಲ್ಲಿ ಅಳವಡಿಸಲಾಗಿತ್ತು ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.