ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಗದಗ ಮಾರ್ಗದ ರಾಷ್ಟ್ರೀಯ ಹೆದ್ದಾರಿಗೆ (ಎನ್‌ಎಚ್–67) ಹೊಂದಿಕೊಂಡ ಭಂಡಿವಾಡ ಕ್ರಾಸ್‌ನಲ್ಲಿ ಪ್ರತಿನಿತ್ಯವೂ ಪ್ರಯಾಣಿಕರು ಹಲವು ಸಂಕಷ್ಟ ಎದುರಿಸಿಕೊಂಡು ವಿವಿಧ ಊರುಗಳಿಗೆ ಸಂಚರಿಸುವ ಸ್ಥಿತಿ ಇದೆ.
ಹುಬ್ಬಳ್ಳಿ ಕಡೆಗೆ ಹಾಗೂ ಗದಗ ಕಡೆಗೆ ಕಣ್ಮುಂದೆಯೆ ಬಸ್‌ಗಳು ನಿಲುಗಡೆಯಾಗದೆ ಮೇಲ್ಸೆತುವೆ ಮೂಲಕ ಹೋಗುತ್ತವೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರು ಅಸಹಾಯಕ ಸ್ಥಿತಿಯಲ್ಲಿ ಇದನ್ನು ನೋಡುತ್ತಾ ನಿಲ್ಲಬೇಕಾಗಿದೆ. ಸರ್ವಿಸ್ ರಸ್ತೆಗೆ ಮತ್ತೊಂದು ಮಗದೊಂದು ಬಸ್ ಬರಬಹುದೆಂದು ಜನರು ಕಾಯುತ್ತಲೇ ಇರಬೇಕಾಗುತ್ತದೆ. ಮುಖ್ಯವಾಗಿ ಗದಗ ಮತ್ತು ಹುಬ್ಬಳ್ಳಿಗೆ ಶಾಲಾ– ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಸಂಚರಿಸಲು ಸಾಧ್ಯವಾಗದೆ ತೊಂದರೆಗೆ ಸಿಲುಕುತ್ತಿದ್ದಾರೆ.
ಹುಬ್ಬಳ್ಳಿಯಿಂದ 15 ಕಿಲೋ ಮೀಟರ್ ದೂರದ ಭಂಡಿವಾಡ ಕ್ರಾಸ್ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೆತುವೆ ನಿರ್ಮಿಸಲಾಗಿದೆ. ಸೇತುವೆಯ ಎರಡು ಪಕ್ಕದಲ್ಲಿ ವಿಶಾಲವಾದ ಸರ್ವಿಸ್ ರಸ್ತೆ ಇದ್ದು, ಭಂಡಿವಾಡ ಗ್ರಾಮದ ಕಡೆಗೆ ತಿರುವು ಇದೆ. ಭಂಡಿವಾಡ ಕ್ರಾಸ್ ಅಭಿವೃದ್ಧಿಯಾಗುತ್ತಿದ್ದು, ಜನವಸತಿಗಳು ಮತ್ತು ವ್ಯಾಪಾರಿ ಮಳಿಗೆಗಳು ತಲೆ ಎತ್ತುತ್ತಲೇ ಇವೆ. ಸದಾ ಜನಸಂಚಾರ ಏರಿಕೆ ಆಗುತ್ತಿದೆ.
ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ಜಾಗ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಾನು ಗ್ರಾಮ ಪಂಚಾಯಿತಿಗೆ ಬಂದ ಬಳಿಕ ಯಾವುದೇ ಬೇಡಿಕೆ ಪತ್ರ ನೀಡಿಲ್ಲ.ಅಶ್ವಿನಿ ರಾಠೋಡ ಭಂಡಿವಾಡ, ಗ್ರಾಮ ಪಂಚಾಯಿತಿ ಪಿಡಿಓ
ಭಂಡಿವಾಡ, ಮಂಟೂರು, ನಾಗರಹಳ್ಳಿ, ಗುಡೇನಕಟ್ಟಿ, ಯರಿನಾರಾಯಣಪುರ, ಮುಳ್ಳಹಳ್ಳಿ, ಚಿಕ್ಕನರ್ತಿ, ಹಿರೇನರ್ತಿ, ಬೆನಕನಹಳ್ಳಿ, ಬಸಾಪುರ, ಚಾಕಲಬ್ಬಿ ಸೇರಿದಂತೆ ಅನೇಕ ಗ್ರಾಮಗಳ ಸಾಕಷ್ಟು ಜನರು ಭಂಡಿವಾಡ ಕ್ರಾಸ್‌ನಲ್ಲಿ ಬಸ್‌ಗಾಗಿ ಕಾಯುತ್ತಾ ನಿಲ್ಲುತ್ತಾರೆ. ಆದರೆ, ಜನರು ನಿರೀಕ್ಷಿಸಿದಂತೆ ಬಸ್‌ಗಳು ನಿಲುಗಡೆ ಆಗುವುದಿಲ್ಲ.
‘ರಾಷ್ಟ್ರೀಯ ಹೆದ್ದಾರಿ ಮೇಲ್ಸೆತುವೆ ಮೇಲೆ ಸಂಚರಿಸುವ ಎಲ್ಲ ಸರ್ಕಾರಿ ಬಸ್‌ಗಳು ಸರ್ವಿಸ್ ರಸ್ತೆಗೆ ಬರಲಿ ಎಂದು ಜನರು ನಿರೀಕ್ಷಿಸುವುದಿಲ್ಲ. ಎಕ್ಸ್‌ಪ್ರೆಸ್ ಅಲ್ಲದ ಬಸ್‌ಗಳು ಸರ್ವಿಸ್ ರಸ್ತೆಯ ಮೂಲಕವೇ ಸಂಚರಿಸುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಭಂಡಿವಾಡ ಕ್ರಾಸ್‌ನಲ್ಲಿ ಯಾರಾದರೂ ಇಳಿಯುವವರು ಇದ್ದರೆ ಮಾತ್ರ ಬಸ್‌ಗಳು ಸರ್ವಿಸ್ ರಸ್ತೆಯತ್ತ ಬರುತ್ತಿವೆ. ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಪ್ರಯಾಣಿಕರು ಕಾದು ನಿಲ್ಲುವುದಕ್ಕೆ ಕ್ರಾಸ್‌ನಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣ ಕೂಡಾ ಇಲ್ಲ’ ಎಂದು ಭಂಡಿವಾಡ ನಿವಾಸಿ ಪುಂಡಲೀಕ ’ಪ್ರಜಾವಾಣಿ’ಗೆ ತಿಳಿಸಿದರು.
‘ಭಂಡಿವಾಡ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾ ಬಂದಿದ್ದಾರೆ. ಇದುವರೆಗೂ ಬಸ್ ನಿಲ್ದಾಣ ನಿರ್ಮಿಸುವುದಕ್ಕೆ ಬಂದಿಲ್ಲ’ ಎನ್ನುವುದು ಗ್ರಾಮಸ್ಥರ ಮಾತು.
ಮಳೆಗಾಲದಲ್ಲಿ ಸಮಸ್ಯೆ ತೀವ್ರ
ಬಸ್‌ಗಾಗಿ ಕಾದು ನಿಲ್ಲುವ ಪ್ರಯಾಣಿಕರು ಮಳೆಗಾಲ ಮತ್ತು ಕಡು ಬಿಸಿಲು ಇದ್ದ ದಿನಗಳಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇದುವರೆಗೂ ಶಾಶ್ವತ ಅಥವಾ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿಲ್ಲ. ಮಹಿಳೆಯರು ಮಕ್ಕಳು ಹಾಗೂ ವಯೋವೃದ್ಧರು ರಸ್ತೆ ಪಕ್ಕದಲ್ಲೇ ನಿಲ್ಲುವ ಸ್ಥಿತಿ ಇದೆ.
‘ಪತ್ರ ಬರೆಯಲು ನಿರ್ಧಾರ’
‘ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ಭಂಡಿವಾಡ ಜನರು ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು ಮತ್ತು ಬಸ್ ನಿಲುಗಡೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ ಪತ್ರ ಬರೆಯುವುದಕ್ಕೆ ನಿರ್ಧರಿಸಲಾಗಿದೆ’ ಎಂದು ಭಂಡಿವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ರಾಠೋಡ ತಿಳಿಸಿದರು. ‘ಕತ್ತಲಾದ ಬಳಿಕ ಎಲ್ಲ ಬಸ್‌ಗಳು ಸೇತುವೆ ಮೇಲಿಂದ ಸಂಚರಿಸುತ್ತವೆ. ಸರ್ವಿಸ್ ರಸ್ತೆಯಲ್ಲಿ ಬರುವುದೇ ಇಲ್ಲ ಎಂದು ಜನರು ಸಮಸ್ಯೆ ಹೇಳುತ್ತಿದ್ದಾರೆ. ಬಸ್ ನಿಲ್ದಾಣ ನಿರ್ಮಾಣವಾದರೆ ಈ ಸಮಸ್ಯೆ ಪರಿಹಾರವಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.