ADVERTISEMENT

ಪೆಟ್ರೋಲ್, ಆಟೊ ಎಲ್‌ಪಿಜಿ ಬೆಲೆಯಲ್ಲಿ ತೀವ್ರ ಏರಿಕೆ: ಸಂಕಷ್ಟದಲ್ಲಿ ಆಟೊ ಚಾಲಕರು

ಎಂ.ನವೀನ್ ಕುಮಾರ್
Published 13 ಮಾರ್ಚ್ 2021, 4:30 IST
Last Updated 13 ಮಾರ್ಚ್ 2021, 4:30 IST
ಎಂ.ಎ. ಶೇಖ್, ಆಟೊ ಚಾಲಕ
ಎಂ.ಎ. ಶೇಖ್, ಆಟೊ ಚಾಲಕ   

ಹುಬ್ಬಳ್ಳಿ: ಪೆಟ್ರೋಲ್ ಮತ್ತು ಆಟೊ ಎಲ್‌ಪಿಜಿ ಬೆಲೆ ದಿನೇ ದಿನೇ ಏರಿಕೆ ಆಗುತ್ತಿರುವುದು ಆಟೊ ಚಾಲಕರು– ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.

ಇಂಧನ ಬೆಲೆ ಏರಿಕೆ ಹೊಡೆತ ಒಂದೆಡೆಯಾದರೆ, ಬೆಲೆ ಏರಿಕೆಯ ಪರಿಣಾಮ ಆದಾಯದಲ್ಲಿ ತೀವ್ರ ಕುಸಿತವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೆಚ್ಚಿನ ಬಾಡಿಗೆ ಕೇಳುತ್ತಿರುವುದು ಚಾಲಕರು ಮತ್ತು ಪ್ರಯಾಣಿಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.

‘ದುಡಿದ ಹಣವನ್ನು ಪೆಟ್ರೋಲ್, ಆಟೊ ಎಲ್‌ಪಿಜಿಗೆ ಹಾಕಿ ಖಾಲಿ ಕೈಯಲ್ಲಿ ಮನೆಗೆ ಹೋಗುವಂತಾಗಿದೆ. ಬೆಳಿಗ್ಗೆಯಿಂದ ರಾತ್ರಿ ವರೆಗೆ ಆಟೊ ಓಡಿಸಿದರೂ ₹200 ಉಳಿಯುವುದು ಸಹ ಕಷ್ಟವಾಗಿದೆ. ಹೀಗೆ ಆದರೆ ಆಟೊ ಚಾಲಕರು ಬೀದಿಗೆ ಬರಬೇಕಾಗುತ್ತದೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ‌ಇಂಧನ ದರವನ್ನು ಕಡಿಮೆ ಮಾಡಬೇಕು ಹಾಗೂ ಕನಿಷ್ಠ ಪ್ರಯಾಣ ದರ ಏರಿಕೆ ಮಾಡಬೇಕು’ ಎಂದು ಚಾಲಕರು ಒಕ್ಕೊರಲಿನಿಂದ ಒತ್ತಾಯಿಸುತ್ತಾರೆ.

ADVERTISEMENT

‘ಸ್ವಂತ ಆಟೊ ಇರುವವರೇ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ವಾಹನವನ್ನು ಬಾಡಿಗೆಗೆ ಪಡೆದು ಅದಕ್ಕೆ ಹಣ (ರಿಪೋರ್ಟ್‌) ಪಾವತಿಸುವವರು ಪಾಡು ಹೇಳ ತೀರದು. ಸಮಸ್ಯೆಯನ್ನು ಈ ಕೂಡಲೇ ಬಗೆಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ಚಾಲಕರು.

ಪೆಟ್ರೋಲ್‌ ಲೀಟರ್‌ಗೆ ₹95, ಆಟೊ ಎಲ್‌ಪಿಜಿ ಲೀಟರ್‌ಗೆ ₹ 51.70 ಇದೆ. ಬೆಲೆ ಏರಿಕೆಯಿಂದ ಬಹಳ ತೊಂದರೆ ಆಗಿದೆ. ಹಿಂದೆ ವಿಶ್ವೇಶ್ವರನಗರದಿಂದ ರೈಲ್ವೆ ನಿಲ್ದಾಣಕ್ಕೆ ₹80 ಪಡೆಯುತ್ತಿದ್ದೆವು. ಈಗಲೂ ಅಷ್ಟೇ ಬಾಡಿಗೆ ಕೊಡುತ್ತೇವೆ ಎಂದು ಪ್ರಯಾಣಿಕರು ಕೇಳುತ್ತಾರೆ. ಈಗಿನ ಆಟೊ ಎಲ್‌ಪಿಜಿ ದರದಲ್ಲಿ ಹಳೆಯ ಬಾಡಿಗೆ ಪಡೆದರೆ ನಷ್ಟ ಆಗುತ್ತದೆ ಎನ್ನುತ್ತಾರೆ 40 ವರ್ಷಗಳಿಂದ ಆಟೊ ಚಾಲಕರಾಗಿರುವ ಎಂ.ಎ. ಶೇಖ್.

ಪ್ರತಿ ದಿನ ಎಪಿಎಂಸಿಯಿಂದ ಹಣ್ಣನ್ನು ಹೋಲ್‌ಸೇಲ್‌ ದರದಲ್ಲಿ ತಂದು ಚಿಲ್ಲರೆ ವ್ಯಾಪಾರ ಮಾಡುತ್ತೇವೆ. ಹಿಂದೆ ಎಪಿಎಂಸಿಗೆ ಅಶೋಕನಗರದಿಂದ ಎರಡೂ ಕಡೆಯ ಬಾಡಿಗೆ ₹150 ಇತ್ತು, ಈಗ ₹250 ಕೇಳುತ್ತಾರೆ. ಕೇಳಿದರೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಎಂದು ಕಾರ್ತಿಕ್ ಫ್ರೂಟ್ಸ್‌ ಅಂಗಡಿ ಮಾಲೀಕ ಶೇಖರ್ ಹೇಳುತ್ತಾರೆ.

2017ರಲ್ಲಿ 1.6 ಕಿ.ಮೀ ಕನಿಷ್ಠ ಪ್ರಯಾಣ ದರ ₹28 ನಿಗದಿ ಮಾಡಲಾಗಿತ್ತು. ಆ ನಂತರ ಅದನ್ನು ಪರಿಷ್ಕರಿಸಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಬಡ ಆಟೊ ಚಾಲಕರ ಮೇಲೆ ಹೊರೆ ಹೇರಿದ್ದು, ಬದುಕುವುದೇ ಕಷ್ಟವಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಆಟೊ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ.

ಪೆಟ್ರೋಲ್ ಮತ್ತು ಆಟೊ ಎಲ್‌ಪಿಜಿ ದರವನ್ನು ಪ್ರತಿ ದಿನ ಏರಿಕೆ ಮಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂ.ಎ. ಶೇಖ್, ಆಟೊ ಚಾಲಕ

ಆಟೊ ಬಾಡಿಗೆ ದರ ಹೆಚ್ಚಾದ ನಂತರ ಆಟೊದ ಬದಲು ಬಸ್‌ನಲ್ಲಿ ಓಡಾಡುತ್ತಿದ್ದೇನೆ ಶೇಖರ್, ಹಣ್ಣಿನ ಅಂಗಡಿ ಮಾಲೀಕ

ಆಟೊ ಚಾಲಕರು ಬೆಲೆ ಏರಿಕೆ ಪರಿಣಾಮ ನಷ್ಟ ಅನುಭವಿಸುವಂತಾಗಿದೆ. ಈ ಕೂಡಲೇ ಸರ್ಕಾರ ಇಂಧನ ದರ ಇಳಿಸಬೇಕು
ಚನ್ನಯ್ಯ, ಆಟೊ ಚಾಲಕ

ಜಿಲ್ಲಾಧಿಕಾರಿ ಅವರು ಕೂಡಲೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಕರೆದು ಕನಿಷ್ಠ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕು
ಶೇಖರಯ್ಯ ಮಠಪತಿ, ಹುಬ್ಬಳ್ಳಿ ಆಟೊ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.