ಹುಬ್ಬಳ್ಳಿ: ಮನೆಯಲ್ಲೇ ಕೂತು ಆರಂಭಿಸಬಹುದಾದ ಆಹಾರ ಸಂಸ್ಕರಣೆ ಉದ್ಯಮಕ್ಕೆ ನೆರವಾಗಲು ಕೇಂದ್ರ ಸರ್ಕಾರವು ‘ಆತ್ಮನಿರ್ಭರ ಭಾರತ’ ಅಭಿಯಾನದ ಭಾಗವಾಗಿ ಆಹಾರ ಸಂಸ್ಕರಣ ಉದ್ದಿಮೆಗಳ ಸಚಿವಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (ಪಿಎಂಎಫ್‍ಎಂಇ) 2020-21ನೇ ಸಾಲಿನಿಂದ ಆರಂಭಿಸಿದೆ.
‘ಹೊಸ ಆಹಾರ ಸಂಸ್ಕರಣ ಘಟಕ ಆರಂಭ ಹಾಗೂ ಈಗಾಗಲೇ ಇರುವ ಘಟಕದ ವಿಸ್ತರಣೆಗೆ ಶೇ 50ರಷ್ಟು ಸಹಾಯಧನದೊಂದಿಗೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶ. ಯೋಜನೆಯಡಿ ಜಿಲ್ಲೆಯಲ್ಲಿ 408 ಫಲಾನುಭವಿಗಳಿದ್ದಾರೆ. ಈ ಪೈಕಿ ಶೇ 30ರಿಂದ 35ರಷ್ಟು ಮಹಿಳೆಯರಿದ್ದಾರೆ. ವಿವಿಧ ಬ್ಯಾಂಕ್‌ಗಳಿಂದ ಒಟ್ಟು ₹ 683.40 ಕೋಟಿ ಸಾಲ ಮಂಜೂರಾಗಿದೆ. ಇನ್ನು 284 ಅರ್ಜಿಗಳ ಸಾಲ ಬಿಡುಗಡೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಧಾರವಾಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯೋಜನೆಯಡಿ ಸಿರಿಧಾನ್ಯಗಳು ಮತ್ತು ಇತರ ಧಾನ್ಯಗಳ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನ, ಬೇಕರಿ ಉತ್ಪನ್ನ, ಕೋಲ್ಡ್ ಪ್ರಸ್ಡ್ ಆಯಿಲ್, ಮೆಣಸಿನ ಪುಡಿ, ಘಟಕ, ಶುಂಠಿ ಸಂಸ್ಕರಣಾ ಘಟಕ, ಅನಾನಸ್ ಸಂಸ್ಕರಣಾ ಘಟಕ, ಮಸಾಲ ಉತ್ಪನ್ನಗಳ ಘಟಕ, ತೆಂಗು ಉತ್ಪನ್ನ, ಕುಕ್ಕುಟ ಉತ್ಪನ್ನ, ಸಾಗರ ಉತ್ಪನ್ನ, ವಿವಿಧ ಹಣ್ಣು ಮತ್ತು ತರಕಾರಿ ಒಳಗೊಂಡ ಆಹಾರ ಸಂಸ್ಕರಣ ಉದ್ದಿಮೆಗಳನ್ನು
ಸ್ಥಾಪಿಸಬಹುದು’ ಎಂದರು.
ಸಹಾಯಧನ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಡಿ ಶೇ 50ರಷ್ಟು ಅಥವಾ ಗರಿಷ್ಠ ₹15 ಲಕ್ಷ ಸಹಾಯಧನ ಸಿಗಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹6 ಲಕ್ಷ ಮತ್ತು ರಾಜ್ಯ ಸರ್ಕಾರದ ಪಾಲು ₹9 ಲಕ್ಷವಾಗಿದೆ’ ಎಂದು ತಿಳಿಸಿದರು.
‘18 ವರ್ಷ ಮೇಲ್ಪಟ್ಟ ಹಾಗೂ ಈಗಾಗಲೇ ಬೇರೆ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದವರೂ ಯೋಜನೆಗೆ ಅರ್ಹರು. ವೈಯಕ್ತಿಕ ಉದ್ಯಮಗಳಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಸಾಲ ಸಂಪರ್ಕಿತ ಶೇ 35ರಷ್ಟು ಸಹಾಯಧನದ ಜೊತೆಗೆ, ರಾಜ್ಯ ಸರ್ಕಾರದಿಂದ ಶೇ 15ರಷ್ಟು ಸಹಾಯಧನ ಅಂದರೆ ₹15 ಲಕ್ಷ ಸಹಾಯಧನ ಪಡೆಯಲು ಅವಕಾಶವಿದೆ’ ಎಂದು ಹೇಳಿದರು.
‘ಪಿಎಂಎಫ್‍ಎಂಇ’ ಯೋಜನೆಯ ಅಂಕಿಅಂಶ
408 ಸಾಲ ಪಡೆದ ಫಲಾನುಭವಿಗಳು 303 ಸಾಲ ತಿರಸ್ಕೃತವಾಗಿರುವ ಅರ್ಜಿಗಳು 284 ಸಾಲ ಮಂಜೂರು ಪ್ರಗತಿಯಲ್ಲಿರುವ ಅರ್ಜಿಗಳು 294 ಡಿಎಲ್‌ಸಿ, ಡಿಆರ್‌ಪಿಗಳಿಂದ ಬಾಕಿ ಉಳಿದಿರುವ ಅರ್ಜಿಗಳು 302 ವಿವಿಧ ಬ್ಯಾಂಕ್‌ಗಳಿಂದ ಬಾಕಿ ಉಳಿದಿರುವ ಅರ್ಜಿಗಳು ₹683.40ಕೋಟಿ ವಿವಿಧ ಬ್ಯಾಂಕ್‌ಗಳಿಂದ ಮಂಜೂರಾದ ಹಣ ₹149.31 ಕೋಟಿ ಕೇಂದ್ರ ಸರ್ಕಾರದಿಂದ ದೊರೆತ ಸಹಾಯಧನ ₹99.54 ಕೋಟಿ ರಾಜ್ಯ ಸರ್ಕಾರದಿಂದ ದೊರೆತ ಸಹಾಯಧನ ₹248.85 ಕೋಟಿ ಒಟ್ಟು ಸಹಾಯಧನ
‘ನಗರ ಭಾಗದಿಂದಲೇ ಅಧಿಕ ಅರ್ಜಿ’
‘ಗ್ರಾಮೀಣ ಭಾಗಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆ ಇರುತ್ತವೆ. ಹಾಗಾಗಿ ಹೆಚ್ಚು ಅರ್ಜಿಗಳು ಅಲ್ಲಿಂದಲೇ ಬರಬೇಕೆಂಬ ನಿರೀಕ್ಷೆ ನಮ್ಮದು. ಆದರೆ ಹುಬ್ಬಳ್ಳಿ– ಧಾರವಾಡ ನಗರ ಭಾಗಗಳಿಂದಲೇ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಧಾರವಾಡ ನಗರದಲ್ಲಿ 156 ಹಾಗೂ ಹುಬ್ಬಳ್ಳಿ ನಗರದಲ್ಲಿ 147 ಫಲಾನುಭವಿಗಳಿದ್ದಾರೆ. ಅಳ್ನಾವರದಲ್ಲಿ ಕೇವಲ 6 ಜನ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಟ್ಟು 408 ಫಲಾನುಭವಿಗಳಲ್ಲಿ ಶೇ 50ರಷ್ಟು ರೊಟ್ಟಿ ತಯಾರಿಸುವ ಘಟಕ ಸ್ಥಾಪನೆ ಹಾಗೂ ಶೇ 25ರಷ್ಟು ಅಡುಗೆ ಎಣ್ಣೆ ತಯಾರಿಸುವ ಹಾಗೂ ಇನ್ನಿತರೆ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. ಯೋಜನೆಯ ಅವಧಿಯನ್ನು 2026ರ ವೆರೆಗೂ ವಿಸ್ತರಿಸಿದ್ದು ಗ್ರಾಮೀಣ ಭಾಗದ ಜನರು ‘ಪಿಎಂಎಫ್‍ಎಂಇ’ ಯೋಜನೆ ಬಗ್ಗೆ ಮಾಹಿತಿ ಪಡೆದು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು. ‘ಯೋಜನೆಗಾಗಿ ಸಿದ್ಧಪಡಿಸಿದ ಪ್ರಸ್ತಾವದೊಂದಿಗೆ ಅರ್ಜಿಯನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿ (ಡಿ.ಆರ್.ಪಿ)ಗಳ ಮೂಲಕವೇ ಬ್ಯಾಂಕ್‌ಗೆ ಸಲ್ಲಿಸಬೇಕು. ಇದಕ್ಕಾಗಿ ಪ್ರತಿ ಯೋಜನೆಗೆ ಡಿಆರ್‌ಪಿಗಳಿಗೆ ನಿಗಮವು ₹20 ಸಾವಿರ ಪಾವತಿಸುತ್ತದೆ. ಜಿಲ್ಲೆಯಲ್ಲಿ 10 ಜನ ಡಿಆರ್‌ಪಿಗಳಿದ್ದಾರೆ. ಆಸಕ್ತರು ಹತ್ತಿರದ ರೈತ ಸಂಪರ್ಕ ಕೇಂದ್ರ/ ತಾಲ್ಲೂಕು ಕೃಷಿ ಇಲಾಖೆ/ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ವೆಬ್‌ಸೈಟ್: https://pmfme.mofpi.gov.in/ https://kappec.karnataka.gov.in/ ಮೊ.9964398062 ಗೆ ಸಂಪರ್ಕಿಸಬಹುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.