ADVERTISEMENT

ನಂಬರ್ ಪ್ಲೇಟ್ ಇಲ್ಲದ 45 ಬೈಕ್‌ ವಶಕ್ಕೆ

ಹುಬ್ಬಳ್ಳಿಯಲ್ಲಿ ಪೊಲೀಸರ ಹೈ ಅಲರ್ಟ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:12 IST
Last Updated 23 ನವೆಂಬರ್ 2022, 13:12 IST
ಹುಬ್ಬಳ್ಳಿಯ ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು
ಹುಬ್ಬಳ್ಳಿಯ ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ದ್ವಿಚಕ್ರ ವಾಹನಗಳು   

ಹುಬ್ಬಳ್ಳಿ: ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಸಂಚಾರ ಠಾಣೆ ಪೊಲೀಸರು, ಕಸಬಾಪೇಟೆ ಮತ್ತು ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಹೈ ಆಲರ್ಟ್ ಆಗಿದ್ದಾರೆ.

ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದಲ್ಲಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ನಂಬರ್ ಪ್ಲೇಟ್ ಅಷ್ಟೇ ಅಲ್ಲದೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದೆ ಅನುಮಾನಾಸ್ಪದವಾಗಿದ್ದವು. ಹಾಗಾಗಿ, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು
ತಿಳಿಸಿದ್ದಾರೆ.

ಕಳವು

ADVERTISEMENT

ತಾಲ್ಲೂಕಿನ ಹೆಬಸೂರ ಗ್ರಾಮದ ಶೌಕತ್ ಅಲಿ ವಕ್ಕುಂದ ಎಂಬುವರ ಮನೆಗೆ ನುಗ್ಗಿರುವ ಕಳ್ಳರು ₹75 ಸಾವಿರ ಮೌಲ್ಯದ ಆಭರಣ ಕದ್ದೊಯ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಗೆ ನುಗ್ಗಿರುವ ಕಳ್ಳರು, ತಿಜೋರಿಯ ಬಾಗಿಲು ಮುರಿದು ಕೃತ್ಯ ಎಸಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಹುಬ್ಬಳ್ಳಿಯ ವಿನಾಯಕ ಇಳಕಲ್ ಎಂಬುವರಿಗೆ ಕರೆ ಮಾಡಿದ ವಂಚಕನೊಬ್ಬ ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ನೆಪದಲ್ಲಿ ₹52 ಸಾವಿರ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಕಾರ್ಡ್ ಅಪ್‌ಡೇಟ್ ಮಾಡುವುದಾಗಿ ವಿನಾಯಕ ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದಿರುವ ವಂಚಕ, ಬಳಿಕ ಹಂತಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾನೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕ್ಕಾಗಿ ಹಲ್ಲೆ

ಸಾಲವಾಗಿ ಪಡೆದಿದ್ದ ₹1,500 ಹಿಂದಿರಿಸಲಿಲ್ಲ ಎಂದು ನವ ಆಯೋಧ್ಯಾ ನಗರದ ಆಟೊ ಚಾಲಕ ಆನಂದ ಕದಂ ಎಂಬುವರ ಮೇಲೆ ಹೆಗ್ಗೇರಿಯ ಮಂಜುನಾಥ ಬಾಗಲಕೋಟೆ ಎಂಬುವರು ಹಲ್ಲೆ ನಡೆಸಿರುವ ಘಟನೆ, ಹೊಸೂರು ಬಳಿಯ ವಾಣಿ ವಿಲಾಸ ವೃತ್ತದಲ್ಲಿ ಸೋಮವಾರ ನಡೆದಿದೆ.

ಆನಂದ ಅವರು, ಆರೋಪಿ ಮಂಜುನಾಥನಿಂದ ₹10 ಸಾವಿರ ಸಾಲ ಪಡೆದಿದ್ದರು. ಈ ಪೈಕಿ, 8,500 ಪಾವತಿಸಿ, ಉಳಿದ ಹಣವನ್ನು ಬಾಕಿ ಉಳಿಸಿದ್ದರು. ಇದೇ ವಿಷಯಕ್ಕಾಗಿ ಆನಂದ ಅವರನ್ನು ಆರೋಪಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ: ವರದಿಗೆ ಸೂಚನೆ

ಕಾನೂನು ವಿದ್ಯಾರ್ಥಿ ಮೇಲೆ ಡಿಸಿಪಿ ಸಾಹಿಲ್ ಬಾಗ್ಲಾ ಅವರ ಜೊತೆಗಿದ್ದ ಕಾನ್‌ಸ್ಟೆಬಲ್ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿ ವರದಿ ನೀಡುವಂತೆ ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ ಅವರಿಗೆ ಪೊಲೀಸ್ ಕಮಿಷನರ್ ಲಾಭೂರಾಮ್ ಸೂಚಿಸಿದ್ದಾರೆ.

ಕಾರವಾರ ರಸ್ತೆಯ ಬೇಕರಿ ಬಳಿ ಸ್ನೇಹಿತರೊಂದಿಗೆ ನಿಂತಿದ್ದ ಸಿದ್ದಾರ್ಥ ವೈದ್ಯ ಅವರ ಮೇಲೆ ನ. 20ರಂದು ಕಾನ್‌ಸ್ಟೆಬಲ್ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದರು. ಘಟನಾ ಸ್ಥಳದಲ್ಲಿದ್ದ ಬಾಗ್ಲಾ ಅವರು ಹಲ್ಲೆ ತಡೆಯಲು ಮುಂದಾಗಿರಲಿಲ್ಲ. ಈ ಕುರಿತು, ಕಾನ್‌ಸ್ಟೆಬಲ್ ಮತ್ತು ಡಿಪಿಸಿ ವಿರುದ್ಧ ಸಿದ್ಧಾರ್ಥ ಅವರು ಕಮಿಷನರ್‌ ಲಾಭೂರಾಮ್ ಅವರಿಗೆ ದೂರು ಕೊಟ್ಟಿದ್ದರು.

ಘಟನೆ ಕುರಿತು ವರದಿ ನೀಡಲು ಡಿಸಿಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲಾಭೂರಾಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.