ADVERTISEMENT

ಗುಂಡಿಗಳ ತಾಣ, ಸವಾರರು ಹೈರಾಣ

ಜನನಿಬಿಡ ಚನ್ನಮ್ಮ ವೃತ್ತ ಸಂಪರ್ಕಿಸುವ ಎಲ್ಲಾ ರಸ್ತೆಗಳೂ ಗುಂಡಿಮಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:45 IST
Last Updated 31 ಜುಲೈ 2019, 19:45 IST
ಗುಂಡಿಗಳಿಂದ ಆವೃತವಾಗಿರುವ ಚನ್ನಮ್ಮನ ವೃತ್ತಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಗುಂಡಿಗಳಿಂದ ಆವೃತವಾಗಿರುವ ಚನ್ನಮ್ಮನ ವೃತ್ತಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ವಾಣಿಜ್ಯನಗರಿಯ ಹೃದಯಭಾಗ ಚನ್ನಮ್ಮ ವೃತ್ತ. ಆರು ದಿಕ್ಕುಗಳ ರಸ್ತೆಗಳು ಕೂಡಿಕೊಳ್ಳುವ ಈ ವೃತ್ತದಲ್ಲಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಚಿತ. ಕಾರಣವಿಷ್ಟೇ ವೃತ್ತ ಸೇರಿದಂತೆ, ಅದರ ಸುತ್ತಮುತ್ತಲಿನ ರಸ್ತೆಗಳು ಗುಂಡಿಮಯವಾಗಿವೆ. ಮಳೆಗೂ ಮುಂಚೆ ಇದ್ದ ಸಣ್ಣ ಗುಂಡಿಗಳು, ಮಳೆಗಾಲದಲ್ಲಿ ದೊಡ್ಡದಾಗಿ ಬಾಯ್ತೆರೆದು ಅಪಾಯ ಆಹ್ವಾನಿಸುತ್ತಿವೆ.

ಬೆಂಗಳೂರು ರಸ್ತೆ, ವಿಜಯಪುರ ರಸ್ತೆ, ಕಾರವಾರ ರಸ್ತೆ, ಸ್ಟೇಷನ್ ರಸ್ತೆ, ನೀಲಿಜನ್ ರಸ್ತೆ, ಧಾರವಾಡ ರಸ್ತೆ ಜತೆಗೆ ಹಲವು ಗಲ್ಲಿ ರಸ್ತೆಗಳು ಕೂಡ ಚನ್ನಮ್ಮನ ವೃತ್ತಕ್ಕೆ ಸಂಪರ್ಕ ಸಾಧಿಸುತ್ತವೆ. ಈ ಎಲ್ಲಾ ರಸ್ತೆಗಳಲ್ಲೂ ಮಾರುದ್ದಕ್ಕೊಂದಿಷ್ಟು ಗುಂಡಿಗಳ ದರ್ಶನವಾಗುತ್ತದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಸಂಚಾರಕ್ಕೆ ಮತ್ತಷ್ಟು ಕಿರಿಕಿರಿ ಉಂಟಾಗುತ್ತಿದೆ.

ಅಪಘಾತಗಳಿಗೆ ಲೆಕ್ಕವಿಲ್ಲ:

ADVERTISEMENT

‘ಚನ್ನಮ್ಮ ವೃತ್ತದಿಂದ ಹೊರಟು ಬಸವ ವನದ ಬಲ ತಿರುವು ತೆಗೆದುಕೊಳ್ಳುವ ರಸ್ತೆಯಲ್ಲಿ ಗುಂಡಿ ಇದೆ. ಕಿರಿದಾದ ತಿರುವಿಗೆ ಹೊಂದಿಕೊಂಡಂತಿದ್ದ ಬಸವ ವನದ ಕಾಂಪೌಂಡ್‌ ಕುಸಿದು ವರ್ಷವಾದರೂ ದುರಸ್ತಿಯಾಗಿಲ್ಲ. ಮಳೆಗೆ ದೊಡ್ಡದಾಗಿ ಬಾಯ್ತೆರೆದಿರುವ ಆ ಗುಂಡಿ ಕಾರಣಕ್ಕಾಗಿಯೇ ನಿತ್ಯ ನಡೆಯುವ ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವಿಲ್ಲ. ಅಲ್ಲದೆ, ಸ್ವಲ್ಪ ಯಾಮಾರಿದರೂ ವಾಹನಗಳು ಬಸವ ವನದೊಳಕ್ಕೆ ಪಲ್ಟಿಯಾಗುತ್ತವೆ’ ಎಂದು ಆಟೊ ಚಾಲಕ ಹನುಮಂತು ಬೇಸರ ವ್ಯಕ್ತಪಡಿಸಿದರು.

‘ಮಳೆಗಾಲದ ಹೊತ್ತಿಗೆ ನಗರದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗುತ್ತವೆ. ಹಿಂದೆ ಮಳೆಗೂ ಮುಂಚೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳುತ್ತಿದ್ದರು. ಆದರೆ, ಈ ಬಾರಿ ಕೇಳುವವರೇ ಇಲ್ಲವಾಗಿದ್ದಾರೆ. ಸ್ಮಾರ್ಟ್‌ ಸಿಟಿಯಾಗುತ್ತಿರುವ ನಮ್ಮೂರಿನ ರಸ್ತೆಗಳ ದುಃಸ್ಥಿತಿ ಕಂಡರೆ ಅಯ್ಯೋ ಎನಿಸುತ್ತದೆ’ ಎಂದು ಬೈಕ್ ಸವಾರ ರಿತೇಶ್ ಆಕ್ರೋಶ ವ್ಯಕ್ತಪಡಿಸಿದರು.

ಈಜುಕೋಳ ಸಿಗ್ನಲ್‌ ಬಳಿಯೂ ದೊಡ್ಡದಾದ ಹೊಂಡಗಳು ನಿರ್ಮಾಣವಾಗಿವೆ. ಮಳೆ ನೀರು ತುಂಬಿಕೊಂಡಿರುವ ಈ ಗುಂಡಿಗಳಲ್ಲಿ ನಿತ್ಯ ದ್ವಿಚಕ್ರ ವಾಹನ ಸವಾರರು ಬಿದ್ದು ಏಳುತ್ತಾರೆ. ಚನ್ನಮ್ಮನ ವೃತ್ತದ ಬಳಿ ರಸ್ತೆ ಮಧ್ಯೆ ಇರುವ ಬಿಆರ್‌ಟಿಎಸ್ ಬಸ್ ನಿಲ್ದಾಣದ ಸಿಮೆಂಟ್ ರಸ್ತೆಯೂ ಗುಂಡಿಯಿಂದ ಹೊರತಾಗಿಲ್ಲ.

ಗುಂಡಿ ಮುಚ್ಚಿದ ಕಾನ್‌ಸ್ಟೆಬಲ್:

ಚನ್ನಮ್ಮನ ವೃತ್ತದಿಂದ ಬೆಂಗಳೂರು ಕಡೆಗೆ ಹೋಗುವ ಮಾರ್ಗದಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಕಲ್ಲು ಮಣ್ಣು ರಸ್ತೆ ತುಂಬಾ ಹರಡಿಕೊಂಡಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ನೆಲಕ್ಕುರುಳು ಅಪಾಯವೂ ಹೆಚ್ಚು.

ಸಿಮೆಂಟ್ ರಸ್ತೆ ಆರಂಭಕ್ಕೂ ಮುಂಚೆ ಇರುವ ಈ ಗುಂಡಿಗಳನ್ನು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರ ಕಾನ್‌ಸ್ಟೆಬಲ್‌ವೊಬ್ಬರು ಇಟ್ಟಿಗೆ ಹಾಗೂ ಕಲ್ಲುಗಳಿಂದ ಮುಚ್ಚುತ್ತಿದ್ದ ದೃಶ್ಯ ಬುಧವಾರ ಕಂಡುಬಂತು.

‘ನಗರದ ಮುಕುಟದಂತಿರುವ ಚನ್ನಮ್ಮನ ವೃತ್ತದ ಆಸುಪಾಸಿನ ರಸ್ತೆಗಳ ಸ್ಥಿತಿಯೇ ಹೀಗಿರುವಾಗ, ಇನ್ನು ಒಳ ರಸ್ತೆಗಳು ಇನ್ಯಾವ ಸ್ಥಿತಿ ತಲುಪಿರಬೇಕು ಹೇಳಿ? ಇಲ್ಲಿ ಹೆಸರಿಗಷ್ಟೇ ಮಹಾನಗರ ಪಾಲಿಕೆ ಇದೆ. ಸಾರ್ವಜನಿಕರ ಸಮಸ್ಯೆಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪಾಲಿಕೆ ಅಂದುಕೊಂಡಿದೆ. ಅದಕ್ಕಾಗಿಯೇ ನಗರದ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ’ ಎಂದು ಹಿರಿಯ ನಾಗರಿಕ ವೆಂಕಟೇಶ್ವರ ರಾವ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.