ADVERTISEMENT

ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತರ ಪಡೆ ಖಾಲಿ: ಜಗದೀಶ ಶೆಟ್ಟರ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ಮೇ 2019, 14:30 IST
Last Updated 24 ಮೇ 2019, 14:30 IST
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಹ್ಲಾದ ಜೋಶಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಹ್ಲಾದ ಜೋಶಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದರೆ, ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತ ಪಡೆಯೇ ಇಲ್ಲದಂತಾಗುತ್ತಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ಪ್ರಹ್ಲಾದ ಜೋಶಿ ಅವರು ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಹಾಗೂ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆದಷ್ಟು ಬೇಗನೇ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.

ಮೋದಿ ಅಲೆ, ಕಾರ್ಯಕರ್ತರ ಸಂಘಟಿತ ಪ್ರಯತ್ನ ಹಾಗೂ ಜೋಶಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದ ಜಯ ಸಿಕ್ಕಿದೆ. ಕ್ಷೇತ್ರದ ಬಹುತೇಕ ಗ್ರಾಮಗಳ ಜನರೊಂದಿಗೆ ಸಂಸದರು ಸಂಪರ್ಕ ಇಟ್ಟುಕೊಂಡಿರುವುದು ಸಹ ದೊಡ್ಡ ಮಟ್ಟದ ಗೆಲುವಿಗೆ ಕಾರಣ. ಶೇ57ರಷ್ಟು ಮತಗಳನ್ನು ಗಳಿಸಿರುವುದು ದೊಡ್ಡ ಸಾಧನೆ ಎಂದು ಅವರು ಹೇಳಿದರು.‌

ADVERTISEMENT

ವಿರೋಧಿಗಳ ಅಪ ಪ್ರಚಾರವನ್ನು ಸಮರ್ಥವನ್ನು ಎದುರಿಸಿ ನಿಜ ಸಂಗತಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದು ಹಾಗೂ ಮೋದಿ ಅವರ ಜನಪ್ರಿಯತೆ ದೊಡ್ಡ ಗೆಲುವಿಗೆ ಪ್ರಮುಖ ಕಾರಣ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಎರಡು ಲಕ್ಷಗಳ ಅಂತರದ ಜಯ ಸಿಕ್ಕಿರುವುದು ಇದೇ ಮೊದಲು. ಜಗದೀಶ ಶೆಟ್ಟರ್ ಹಾಗೂ ಅರವಿಂದ ಬೆಲ್ಲದ ಅವರ ಕ್ಷೇತ್ರದಲ್ಲಿಯೇ ಒಂದು ಲಕ್ಷಕ್ಕಿಂತ ಅಧಿಕ ಲೀಡ್ ಸಿಕ್ಕಿದೆ ಎಂದರು. 2004ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕ ಬಗೆ ಹಾಗೂ ಆಗ ಜಗದೀಶ ಶೆಟ್ಟರ್ ಅವರು ಸಹಾಯ ಮಾಡಿದನ್ನು ಅವರು ಸ್ಮರಿಸಿದರು.

ಬಿಜೆಪಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಶಾಸಕ ಅಮೃತ್ ದೇಸಾಯಿ, ಮುಖಂಡರಾದ ಮಹೇಶ್ ಟೆಂಗಿನಕಾಯಿ, ಶಿವಾನಂದ ಮುತ್ತಣ್ಣವರ, ದತ್ತಮೂರ್ತಿ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.