ADVERTISEMENT

ಪ್ರಜಾವಾಣಿ ಕಾವ್ಯದೀಪಾವಳಿ 2020 ಸಂಭ್ರಮ: ಕಾವ್ಯದೀವಿಗೆ ಮುಡಿಸಿದ ಕವಿಸಮೂಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 21:23 IST
Last Updated 17 ನವೆಂಬರ್ 2020, 21:23 IST

ಹುಬ್ಬಳ್ಳಿ: ಕಾವ್ಯ ಸಂಕಟದಿಂದ ಹುಟ್ಟುತ್ತದೆ, ಪ್ರೀತಿಯಿಂದ ಹುಟ್ಟುತ್ತದೆ, ಕಟ್ಟುವ ಕೆಲಸ ಮಾಡುತ್ತದೆ. ಹೊಸತನದ ಹುಡುಕಾಟದಲ್ಲಿರುತ್ತದೆ. ಕಾವ್ಯ ಜೀವನದರ್ಶನವಾಗಿದೆ ಎಂದು ಡಾ.ಸತ್ಯಾನಂದ ಪಾತ್ರೋಟ ಅವರು ಅಭಿಪ್ರಾಯ ಪಟ್ಟರು.

ಅವರು ನ.16ರಂದು ‘ಪ್ರಜಾವಾಣಿ’ ಬಳಗ ಹಮ್ಮಿಕೊಂಡಿದ್ದ ಆನ್‌ಲೈನ್‌ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಜೀವನಪ್ರೀತಿಯಿಲ್ಲದವರು, ಯಾರನ್ನೂ ಪ್ರೀತಿಸದವರು ಕವಿಯಾಗಲಾರರು, ಕಲಾವಿದರಾಗಲಾರರು. ಪ್ರೀತಿಯ ಅಂತಃಕರುಣೆ, ನಿರ್ಭೀತಿಯ ಶೌರ್ಯದ ಲಕ್ಷಣಗಳೆರಡೂ ಇರಬೇಕು. ಜಾತ್ಯತೀತ ಮತ್ತು ಧರ್ಮಾತೀತವಾಗಿರಬೇಕು ಎಂದು‍ಪ್ರತಿಪಾದಿಸಿದರು.

ADVERTISEMENT

ಸುತ್ತಲೂ ಕಾರ್ಗತ್ತಲು, ಕವಿದು ಬೀಸುವಾಗ ಸುಂಟರಗಾಳಿ ದೀಪ ಹಚ್ಚುವುದಾದರೂ ಹೇಗೆ ಎಂಬ ಪ್ರಶ್ನೆಯೊಂದಿಗೆ ಈ ಭಾಗದಲ್ಲಿಯ ನೆರೆ ಮತ್ತು ಪ್ರವಾಹ ಸ್ಥಿತಿಯಲ್ಲಿ ಹಬ್ಬವನ್ನು ಸಂಭ್ರಮಿಸುವುದಾದರೂ ಹೇಗೆ ಎಂದು ನೋಡುಗರೊಂದಿಗೆ ಮುಖಾಮುಖಿಯಾದರು. ಕವಿಗೋಷ್ಠಿಗೊಂದು ಸಂಕಟದ ಧ್ವನಿಯಾಗಿ ಆರಂಭ ನೀಡಿದರು.

ನಿನ್ನ ಎದೆಯಗಲದಾಕಾಶದಲಿ;ನಕ್ಷತ್ರ ಖಚಿತ ರಾತ್ರಿ;ಕೂಗು ನೂರಾರು,ಅಸಂಖ್ಯ ನರಳಿಕೆ;ಸುಖವೆಂಬ ಗಡಿಗೆ ತುಂಬಲು
ಎಷ್ಟೆಷ್ಟು ಜನರ;ಹಸಿವು,ಕಣ್ಣೀರು,ಬೆವರು ಎಂಬ ಹಳಹಳಿಕೆಯೊಂದಿಗೆ ರವಿಕಾಂತೇಗೌಡರ ಕವಿತೆ ನೋಡುಗರನ್ನು ಸೆಳೆದಿಟ್ಟಿತು.

‘ನೆಲದ ಸೀತೆಯರದ್ದು ಮುಗಿಯದ ಬಯಕೆ:ಇಂದಾದರೂ ಬಂದೀತೇ ನನ್ನ ಅಂಗಳಕೆ ಬಂಗಾರದ ಜಿಂಕೆ?‘ ನಂದಿನಿ ವಿಶ್ವನಾಥ ಹೆದ್ದುರ್ಗ ಅವರ ಕನವರಿಕೆಯ ನಂತರ ವಿಲ್ಸನ್‌ ಕಟೀಲ್‌ ಅವರ ’ನಿಷೇಧಿತ ನೋಟು’ ಕವಿತೆಯೊಳಗೆ ಬದುಕಿನ ಹಲವು ನೋಟಗಳು ಅನಾವರಣವಾದವು. ಅಕ್ಷತಾ ಹುಂಚದಕಟ್ಟೆ ಅವರ ಬಾಪುವಿನ ಕನಸಿನ ಭಾರತ ನಿಧಾನವಾಗಿ ಸಾಕಾರಗೊಳ್ಳುವ ಚಿತ್ರಣ
ದೊಂದಿಗೆ ಆಶಾಭಾವವನ್ನು ಹುಟ್ಟಿಹಾಕಿತು.

ಸೌಹಾರ್ದ, ಪರಸ್ಪರ ಗೌರವ ಎಂಬ ಪದಗಳನ್ನು ಓದುವುದಲ್ಲ, ಬಾಳುವುದು ಎಂಬುದನ್ನು ಧ್ವನಿಸಿದ್ದು ರಾಜಕುಮಾರ ಮಡಿವಾಳರ ಕವನ ’ಸಾರಾ’; ಶೋಭಾ ಹಿರೇಕೈ ಅವರು ದೀಪಾವಳಿಯ ಆಶಯವನ್ನು ಬಿಚ್ಚಿಟ್ಟರು.

ಒಂದು ನಿರ್ಗತಿಕ ಸಂಬಂಧದ ಬಾಂಧವ್ಯದೊಳಗಿನ ನವಿರಾದ ಪ್ರೀತಿ, ದಟ್ಟವಾದ ವಿರಹ ಎಲ್ಲಕ್ಕೂ ಮೀರಿದ ಮತ್ತದೇ ಪ್ರೀತಿ ಪ್ರವರ ಕೊಟ್ಟೂರು ಅವರ ‘ಖಾಲಿತನ’ ಕವಿತೆ ಚಳಿರಾತ್ರಿಯ ಕತ್ತಲೆಯಂತೆಯೇ ದಟ್ಟವಾಗಿ ಆವರಿಸಿಕೊಳ್ಳುತ್ತದೆ.

ಬದುಕಿನ ಚಾಂಚಲ್ಯ, ಅನಿವಾರ್ಯಗಳನ್ನೆಲ್ಲ ರೂಪಕದಲ್ಲಿ ತೆರೆದಿಟ್ಟ ಕವಿತೆ ಮಮತಾ ಅರಸೀಕೆರೆ ಅವರ ಸಮಾಧಿಸ್ಥಿತ ಮೀನು. ಮುಖದಿಂದ ಮುಖಕ್ಕೆ ನಗುವನ್ನು ದಾಟಿಸುವುದು ಅದೆಷ್ಟು ಕಷ್ಟ ಎಂಬ ಪ್ರಶ್ನೆಯೊಂದಿಗೆ ಆರಿಫ್‌ ರಾಜಾ ತಮ್ಮ ಗಜಲ್‌ ಅನ್ನು ಪ್ರಸ್ತುತಪಡಿಸಿದರು.

ರಮೇಶ ಅರೋಲಿ ಅವರ ‘ರಂಗೋಲಿ ತುಂಬೆಲ್ಲ ರಗುತದ ಚುಕ್ಕಿಯು’ ಬೇಡವೆಂದರೂ ಅತ್ಯಾಚಾರಗಳನ್ನು ನೆನಪಿಸಿಬಿಡುತ್ತವೆ. ಹೆಣ್ಣುಮಕ್ಕಳ ಪಾಡನ್ನೇ ಹಾಡಿದ ಕವಿ, ಮನದ ತುಂಬೆಲ್ಲ ವಿಷಾದ, ವಿಷಣ್ಣ ಭಾವ ತುಂಬಿಸಿ ಆವರಿಸಿಕೊಳ್ಳುತ್ತಾರೆ.

ತಾಯ್ತನವನ್ನು ಅನುಭವಿಸುತ್ತಿರುವ ಕಾವ್ಯಾ ಕಡಮೆ ಅವರ ಕವಿತೆ ‘ಮಗು’ ಗರ್ಭದೊಂದಿಗೆ ಬ್ರಹ್ಮಾಂಡವನ್ನೂ ಬೆಸೆಯುತ್ತ, ಮಗುವಿನ
ಬೆರಗುಗಣ್ಣಿನಿಂದಲೇ ನೋಡುವ ರೂಪಕ ಮುಗುದೆಯ ಮಾತುಗಳಾಗಿ ಕೇಳಿಸಿದವು. ಬೆಳಕಿನ ದಾರಿಗೆ ಬುತ್ತಿಕಟ್ಟಿ ಉಣಿಸಿದ್ದು, ಪ್ರವೀಣ ಅವರು.

ಸಿರಿಗೌರಿಯಲ್ಲೂ ಇದ್ದಾಳೆ ಭಾಗೀರಥಿ ಕವಿತೆಯೋದಿದ ಸಂಧ್ಯಾರಾಣಿ,ಶಿವೆಯಿಲ್ಲದ ಶಿವನೆದೆಯಲ್ಲಿ ಆರುವುದಿಲ್ಲ ಸತಿಯ ಚಿತೆ ಎಂಬ ಸಾಲಿನೊಂದಿಗೆ ಸಾಂಗತ್ಯದ ಬಗೆಗಿನ ಪ್ರಶ್ನೆಗಳನ್ನು ಉಳಿಸಿಯೇ ಹೋದರು. ಮಹಾದೇವ ಶಂಕನಪುರ ಅವರು ಅವಮಾನಗಳೊಂದಿಗೆ ಅಭಿಮಾನವನ್ನೂ ಎದುರಾಗಿಸಿಕೊಂಡು ಕವಿತೆ ಓದಿದರು ‘ಅಂಬೇಡ್ಕರ್‌ಗೆ ಒಂದು ಪತ್ರ’ ಕವನದಲ್ಲಿ.

ಅವಳ ಮತ್ತು ಅವನ ಕಾವ್ಯದ ಹೆಜ್ಜೆಯ ದೂರಗಳನ್ನು ಅಳೆದವರು ಮಂಜುಳಾ ಹಿರೇಮಠ. ‘ನಿನದು ನನದು ಅನದ ನಿನದ
ನಾ ನೀ ಅಳಿದು ಉಳಿದ;ಏಕತಾರಿಯ ಒಡಲ ನಾದ’ ಎಂದು ಗೀತಾ ವಸಂತ್‌ ಲೋಕದ ಸದ್ದುಗಳೆಲ್ಲ ನಾದವಾದ ಬಗೆಯ ಹೇಳಿದರು.

ಸುಟ್ಟ ಹೂವುಗಳ ಬಗೆಗೆ ಭುವನಾ ಹಿರೇಮಠ ಧ್ವನಿಯಾದರೆ, ಲಂಡನ್‌ ಕಡಲ ತಡಿಯ ಚಿತ್ರಣವನ್ನು ವಿಕ್ರಮ್‌ ಹತ್ವಾರ್‌ ಬಿಚ್ಚಿಟ್ಟರು. ಕವಿತೆಗಳೆಲ್ಲವೂ ಚಿತ್ರಗಳಾಗಿ, ಸದ್ದಾಗಿ, ಧ್ವನಿಯಾಗಿ, ನಾದವಾಗಿ, ನರನಾಡಿಗಳಲ್ಲೆಲ್ಲ ಸಾಹಿತ್ಯದ ಬೆಳಕಿನೆಳೆ ಮೂಡುವಂತೆ ಮಾಡಿತು ಈ ಕವಿಗೋಷ್ಠಿ.

ಸಾಮಾನ್ಯರ ವೇದನೆಗೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಸ್ಥೈರ್ಯ ನೀಡುತ್ತ ಹೋಗುತ್ತವೆ. ವರ್ತಮಾನ ಆನಂದದಾಯಕವಾಗಿಲ್ಲ. ಯಾತನಾಮಯವಾಗಿದೆ. ಆದರೆ ಬದುಕನ್ನು ಸಹನೀಯಗೊಳಿಸುವ ಶಕ್ತಿ ಕಾವ್ಯಕ್ಕಿದೆ ಎಂದು ಕವಿಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಎಚ್‌.ಎಲ್‌. ಪುಷ್ಪಾ ಅವರ ಆಶಯವನ್ನು ಕವಿಗೋಷ್ಠಿಯು ಈಡೇರಿಸಿತು.

ಭಾಗವಹಿಸಿದ ಕವಿಗಳು

ರವಿಕಾಂತೇಗೌಡ;ನಂದಿನಿ ಹೆದ್ದುರ್ಗ;ವಿಲ್ಸನ್‌ ಕಟೀಲ್‌;ಅಕ್ಷತಾ ಹುಂಚದಕಟ್ಟೆ; ರಾಜಕುಮಾರ ಮಡಿವಾಳರ;ಶೋಭಾ ನಾಯ್ಕ ಹಿರೇಕೈ;ಪ್ರವರ ಕೊಟ್ಟೂರು;ಮಮತಾ ಅರಸೀಕೆರೆ;ಆರಿಫ್‌ ರಾಜಾ;ರಮೇಶ್‌ ಅರೋಲಿ;ಕಾವ್ಯಾ ಕಡಮೆ;ಪ್ರವೀಣ್‌ ಬೆಳಗಾವಿ;ಸಂಧ್ಯಾರಾಣಿ;ಮಹಾದೇವ ಶಂಕನಪುರ;ಮಂಜುಳಾ ಹಿರೇಮಠ;ಗೀತಾ ವಸಂತ್‌;ಭುವನಾ ಹಿರೇಮಠ;ವಿಕ್ರಮ್ ಹತ್ವಾರ್

ಆನ್‌ಲೈನ್‌ನಲ್ಲಿ ಕವಿಗೋಷ್ಠಿ ನೋಡಲು: https://www.facebook.com/prajavani.net/videos/820122488739541

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.